ಕರೊನಾ ಬಿಕ್ಕಟ್ಟಿನ ಬಳಿಕ ಆರ್ಥಿಕ ಚೇತರಿಕೆ ಸುಳಿವು

Economic
Published on

ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್​ಡೌನ್ ಕಾರಣಕ್ಕೆ ಮುಗ್ಗರಿಸಿದ್ದ ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಚುರುಕು ಪಡೆಯುತ್ತಿವೆ. ಇಂಧನ ಮತ್ತು ವಿದ್ಯುತ್ ಬಳಕೆ, ರೈಲು ಸರಕು ಸಾಗಾಟ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ. ದೇಶೀಯ ಮಾರಾಟ ಹಾಗೂ ಆಮದು ಪ್ರಮಾಣದಲ್ಲಿ ಕೂಡ ಏರಿಕೆ ದಾಖಲಾಗುತ್ತಿದೆ. ಪ್ರಸ್ತುತ ಆರ್ಥಿಕ ಸ್ಥಿತಿ ಕೋವಿಡ್ ಪೂರ್ವದ ಪ್ರಮಾಣಕ್ಕಿಂತ ಕಡಿಮೆಯಿದ್ದರೂ, ಚೇತರಿಕೆ ಸೂಚನೆ ನೀಡುತ್ತಿವೆ.

ಜಿಎಸ್​ಟಿ ಸಂಗ್ರಹ ಶೇ. 4 ಏರಿಕೆ: ಜಿಎಸ್​ಟಿ ಸಂಗ್ರಹ ಸೆಪ್ಟೆಂಬರ್​ನಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು ಒಟ್ಟು 95,000 ಕೋಟಿ ರೂಪಾಯಿ ಆಕರಣೆಯಾಗಿದೆ. ಲಾಕ್​ಡೌನ್​ನಿಂದಾಗಿ ಜಿಎಸ್​ಟಿ ಸಂಗ್ರಹ ಕುಸಿತವಾಗಿ ರಾಜ್ಯಗಳು ಆದಾಯ ಕೊರತೆಯಿಂದ ಸೊರಗುತ್ತಿವೆ. ಈಗ ಏರಿಕೆ ಕಂಡುಬಂದಿರುವುದು ತುಸು ನಿರಾಳತೆ ತಂದಿದೆ. ಜತೆಗೆ ಸರಕುಗಳ ಆಮದು, ದೇಶೀಯ ವ್ಯವಹಾರಗಳಿಂದ ಬರುವ ಆದಾಯವೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಡಿಜಿಟಲ್ ಪಾವತಿ ಏರಿಕೆ
  • ಆಗಸ್ಟ್​ನಲ್ಲಿ ಯುಪಿಐ ಡಿಜಿಟಲ್ ಪಾವತಿ ಶೇಕಡ 12 ಏರಿಕೆ ಕಂಡಿದೆ. 1.8 ಬಿಲಿಯನ್ ವ್ಯವಹಾರ ದಾಖಲಾಗಿದೆ.
  • ಐಎಂಪಿಎಸ್ ವ್ಯವಹಾರ ಸೆಪ್ಟೆಂಬರ್​ನಲ್ಲಿ ಶೇ.13 ಹೆಚ್ಚಿದೆ.
  • ವಾಹನಗಳ ಸಂಚಾರ ಪ್ರಮಾಣ ಸೂಚಿಸುವ ಫಾಸ್ಟಾ್ಯಗ್ ಸೆಪ್ಟೆಂಬರ್​ನಲ್ಲಿ 110 ಮಿಲಿಯನ್ ವ್ಯವಹಾರ ದಾಖಲಿಸಿದೆ.
ವಾಹನೋದ್ಯಮ ಲವಲವಿಕೆ

ಹೊಸ ಮಾಡೆಲ್​ಗಳು, ಬೆಲೆ ಕಡಿತ ಮೊದಲಾದ ಕ್ರಮಗಳಿಂದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಲವಲವಿಕೆ ಕಂಡುಬಂದಿದೆ. ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ದಾಖಲಾಗುತ್ತಿದೆ. ಹಬ್ಬಗಳ ಹಿನ್ನೆಲೆಯಲ್ಲಿ ನೀಡಲಾಗುವ ವಿಶೇಷ ರಿಯಾಯಿತಿಗಳೂ ವಾಹನೋದ್ಯಮದ ಚೇತರಿಕೆಗೆ ಕಾರಣವಾಗುತ್ತಿದೆ. ಉತ್ಪಾದನೆ ವಲಯ ಲಯ ಕಾಣುತ್ತಿದ್ದು ಆಗಸ್ಟ್​ನಲ್ಲಿ 52 ಇದ್ದ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಸೆಪ್ಟೆಂಬರ್​ನಲ್ಲಿ 56.8ಕ್ಕೆ ಜಿಗಿದಿದೆ.

ರೈಲು ಸರಕು ಸಾಗಾಟ ಹೆಚ್ಚಳ

ಕಳೆದ ವರ್ಷದ ಸೆಪ್ಟೆಂಬರ್​ಗೆ ಹೋಲಿಸಿದರೆ, ರೈಲ್ವೆ ಸರಕು ಸಾಗಾಟದಲ್ಲಿ ಶೇ. 15.3 ಏರಿಕೆ ಕಂಡಿದೆ. ಇದರಿಂದಾಗುವ ಆದಾಯದಲ್ಲಿ ಶೇ. 13.5 ಏರಿಕೆಯಾಗಿದೆ. ಆಹಾರಧಾನ್ಯಗಳ ಸಾಗಾಟದಲ್ಲಿ ಶೇ. 101 ಏರಿಕೆಯಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ್ಝ

  • 100 ಮಿಲಿಯನ್ ಟನ್: ಸೆಪ್ಟೆಂಬರ್​ನಲ್ಲಿ ರೈಲುಗಳಲ್ಲಿ ಸಾಗಿಸಿದ ಆಹಾರಧಾನ್ಯ.
  • 10,000 ಕೋಟಿ ರೂಪಾಯಿ: ಸಾಗಾಟದಿಂದ ಬಂದಿರುವ ಆದಾಯ
5.7 ಕೋಟಿ ಇ-ವೇ ಬಿಲ್

ಸೆಪ್ಟೆಂಬರ್​ನಲ್ಲಿ ದಾಖಲೆಯ 5.7 ಕೋಟಿ ಇ-ವೇ ಬಿಲ್​ಗಳನ್ನು ನೀಡಲಾಗಿದೆ. ಇದು ವಾಣಿಜ್ಯ ವ್ಯವಹಾರಗಳು ಚುರುಕುಗೊಂಡು ಆರ್ಥಿಕತೆ ಚೇತರಿಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net