ಆರ್ಥಿಕ ಪ್ರಗತಿ ಆಶಾದಾಯಕ; 2025-26ರಲ್ಲಿ ಶೇ. 6.3ರಿಂದ ಶೇ.6.8ರಷ್ಟು ಬೆಳವಣಿಗೆ

Finance Ministry
Published on

ನವದೆಹಲಿ: ಶನಿವಾರ ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಆಯವ್ಯಯ ಪತ್ರವನ್ನು ಪೂರ್ವಾಹ್ನ 11 ಗಂಟೆಗೆ ಮಂಡಿಸಲಿದ್ದು, ಅದಕ್ಕೂ ಮುನ್ನ, ಶುಕ್ರವಾರ 2024-25ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿ, ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಸದೃಢವಾಗಿವೆ ಎಂದು ಹೇಳಿದ್ದಾರೆ.

ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ವಿವೇಕಯುತ ನೀತಿ ನಿರ್ವಹಣೆ, ವಿವಿಧ ಕಾರ್ಯತಂತ್ರಗಳು ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ನಿರ್ಮಲಾ, ಜಾಗತಿಕವಾಗಿ ಉಂಟಾಗಿರುವ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಹಣದುಬ್ಬರದ ಅಪಾಯ ಕಾಡುತ್ತಿದೆ ಎಂಬ ಎಚ್ಚರಿಕೆ ಮಾತನ್ನೂ ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಣ: ಹಣಕಾಸು ವರ್ಷ 2024ರಲ್ಲಿ ಹಣದುಬ್ಬರ ಪ್ರಮಾಣ ಶೇ. 5.4 ಇದ್ದದ್ದು, 2024ರ ಏಪ್ರಿಲ್- ಡಿಸೆಂಬರ್ ಅವಧಿಗೆ ಶೇ. 4.9ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ತೆಗೆದುಕೊಂಡ ವಿವಿಧ ಉಪಕ್ರಮಗಳು, ವಿತ್ತೀಯ ನೀತಿಗಳ ಅನುಷ್ಠಾನ ದಿಂದ ಇದು ಸಾಧ್ಯವಾಗಿದೆ ಎಂದು ಅರ್ಥಿಕ ಸಮೀಕ್ಷೆ ವರದಿ ವಿವರಿಸಿದೆ.

ಹೂಡಿಕೆ ಹೆಚ್ಚಳ ಅಗತ್ಯ: ದೇಶದ ಬೆಳವಣಿಗೆಗೆ ಪೂರಕವಾಗಿ ಹೂಡಿಕೆ ಪ್ರಮಾಣ ಶೇ. 31ರಿಂದ 35ಕ್ಕೆ ಹೆಚ್ಚಾಗಬೇಕು. ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.

ಉತ್ಪಾದನೆ ಏರಿಕೆಯಾಗಲಿ: ಹವಾಮಾನ ವೈಪರೀತ್ಯದಿಂ ದಾಗುವ ಬೆಳೆಹಾನಿಯ ಪ್ರಮಾಣ ವನ್ನು ಕಡಿಮೆ ಮಾಡಬೇಕು ಮತ್ತು ಇಳುವರಿಯನ್ನು ಹೆಚ್ಚಿಸಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಟೊಮ್ಯಾಟೋ, ಈರುಳ್ಳಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯ ಆರ್ಥಿಕ ಸಮೀಕ್ಷೆಯಲ್ಲಿ ಪ್ರತಿಪಾದಿಸಲಾಗಿದೆ.

5G

ಭವಿಷ್ಯದತ್ತ ದೃಷ್ಟಿ: ಪ್ರಸಕ್ತ ಆರ್ಥಿಕ ಬೆಳವಣಿಗೆಯ ದರವು ಶೇ. 6ರಿಂದ ಶೇ. 6.8ರ ಒಳಗಿದೆ. ಆದರೆ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಮುಂದಿನ ಎರಡು ದಶಕಗಳವರೆಗೆ ಸರಾಸರಿ ಶೇ. 8ರಷ್ಟು ಆರ್ಥಿಕ ಬೆಳವಣಿಗೆ (ಜಿಡಿಪಿ) ಸಾಧಿಸುವುದು ಅಗತ್ಯವಾಗಿದೆ ಎಂದು ಸಮೀಕ್ಷೆಯಲ್ಲಿ ಭವಿಷ್ಯದ ನೋಟದ ಬಗ್ಗೆ ಗಮನ ಹರಿಸಲಾಗಿದ್ದು, ಗುರಿ ನಿಶ್ಚಯಪಡಿಸಲಾಗಿದೆ.

ಏನಿದು ಆರ್ಥಿಕ ಸಮೀಕ್ಷೆ?: ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್​ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತ ಪಡಿಸುವ ವಾರ್ಷಿಕ ದಾಖಲೆಯೇ ಆರ್ಥಿಕ ಸಮೀಕ್ಷೆ. ಇದು ಅಲ್ಪಾವಧಿಯಿಂದ ಮಧ್ಯಮಾವಧಿಯ ಆರ್ಥಿಕತೆಯ ನಿರೀಕ್ಷೆಗಳ ಅವಲೋಕನವನ್ನು ಸಹ ಒದಗಿಸುತ್ತದೆ. ಸರ್ಕಾರದ ನೀತಿಗಳು ಮತ್ತು ಮುಂಬರುವ ಹಣಕಾಸು ವರ್ಷದ ದೃಷ್ಟಿಕೋನವನ್ನು ಇದು ಒಳಗೊಂಡಿರುತ್ತದೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ್ ನಾಗೇಶ್ವರನ್ ನೇತೃತ್ವದ ಆರ್ಥಿಕ ವ್ಯವಹಾರಗಳ ಇಲಾಖೆಯು ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಮೊದಲ ಆರ್ಥಿಕ ಸಮೀಕ್ಷೆಯು 1950-51ರ ಬಜೆಟ್ ದಾಖಲೆಗಳ ಭಾಗವಾಗಿ ಅಸ್ತಿತ್ವಕ್ಕೆ ಬಂದಿತ್ತು. 1966ರ ನಂತರ ಇದನ್ನು ಕೇಂದ್ರ ಬಜೆಟ್​ನಿಂದ ಪ್ರತ್ಯೇಕಿಸಲಾಯಿತು. ಬಜೆಟ್ ಮಂಡನೆಗೆ ಒಂದು ದಿನ ಮೊದಲು ಪ್ರಸ್ತುತ ಪಡಿಸಲಾಯಿತು.

Agriculture

ಕೃಷಿ ವಲಯದಲ್ಲಿ ಅಭಿವೃದ್ಧಿ: ಕೃಷಿ ವಲಯವು 2017ರಿಂದ 2023ರ ಅವಧಿಯಲ್ಲಿ ಸರಾಸರಿ ಶೇ. 5ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ. 2024-25ರ ಹಣಕಾಸು ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಕೃಷಿ ವಲಯ ಶೇ.3.5ರಷ್ಟು ಬೆಳವಣಿಗೆ ದಾಖಲಿಸಿದೆ. ಭಾರತದ ಒಟ್ಟು ರಫ್ತಿನಲ್ಲಿ ಆಹಾರ ರಫ್ತು ಶೇ. 11.7ರಷ್ಟಿದೆ.

ಡಿಜಿಟಲ್ ಸಂಪರ್ಕ ಸುಧಾರಣೆಗೆ 5ಜಿ ಬಲ: ದೇಶದ ಬಹುತೇಕ ಜಿಲ್ಲೆಗಳಿಗೆ 5ಜಿ ಸಂಪರ್ಕವನ್ನು ವಿಸ್ತರಿಸುವ ಮೂಲಕ ಟೆಲಿಕಾಂ ಸೌಲಭ್ಯ ಮತ್ತು ಬಳಕೆದಾರರ ಅನುಭವವನ್ನು ಉತ್ತಮಪಡಿಸುವಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು 2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ. ‘ಭಾರತ್ ನೆಟ್’ ಯೋಜನೆಯ ಮೂಲಕ ದೇಶದಲ್ಲಿ ದೂರಸಂಪರ್ಕ ಸೌಲಭ್ಯ ಗಣನೀಯವಾಗಿ ಸುಧಾರಣೆಯಾಗಿದೆ. ಹಳ್ಳಿಗಳಿಗೆ ಮತ್ತು ಮೊಬೈಲ್ ನೆಟ್​ವರ್ಕ್ ದೊರಕದ ಗಡಿ ಪ್ರದೇಶ, ದ್ವೀಪಗಳಲ್ಲಿ ಈ ಯೋಜನೆ ಮೂಲಕ ಬ್ರಾಡ್​ಬ್ಯಾಂಡ್ ಸೌಲಭ್ಯವನ್ನು ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು. ಡಿಜಿಟಲ್ ಸಂಪರ್ಕ ವ್ಯವಸ್ಥೆಯ ನಾವೀನ್ಯತೆ ಮತ್ತು ನಿಯಂತ್ರಕಗಳ ಸುಧಾರಣೆಯಲ್ಲಿ ಕಳೆದ ವರ್ಷ ಬಹುದೊಡ್ಡ ಸುಧಾರಣೆಗಳನ್ನು ತರಲಾಗಿದೆ. ಸದ್ಯ ದೇಶದ 783 ಜಿಲ್ಲೆಗಳ ಪೈಕಿ 779ರಲ್ಲಿ 5ಜಿ ಸಂಪರ್ಕ ಸಿಗುತ್ತಿದೆ. ‘ಭಾರತ್ ನೆಟ್’ ಯೋಜನೆಯಡಿ 2024ರ ಡಿಸೆಂಬರ್ ವರದಿ ಪ್ರಕಾರ, 6.92 ಲಕ್ಷ ಕಿಲೋಮೀಟರ್​ಗಳಷ್ಟು ದೂರ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಎಳೆಯಲಾಗಿದೆ. ಅಲ್ಲದೆ, 2.14 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಸ್ಯಾಟಲೈಟ್ ಮತ್ತು ಎಫ್​ಟಿಟಿಎಚ್ ಮೂಲಕ ಇಂಟರ್​ನೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಚಿವೆ ನಿರ್ಮಲಾ ವಿವರಿಸಿದರು.

ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ಏರಿಕೆ?: ಈಗಾಗಲೇ ಚಿನ್ನದ ಬೆಲೆ ಸಾರ್ವಕಾಲಿಕ ಎತ್ತರಕ್ಕೆ ತಲುಪಿದೆ. ಆದರೆ, 2025ರಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ಮತ್ತು ಬೆಳ್ಳಿ ದರ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಚಿನ್ನದ ದರ ಕುಸಿತದಿಂದಾಗಿ ಹೂಡಿಕೆದಾರರ ಮೇಲೆ ಪರಿಣಾಮ ಬೀಳಬಹುದು. ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ರಾಷ್ಟ್ರ ಭಾರತವಾಗಿದೆ. ತೈಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದ್ದು, ನೈಸರ್ಗಿಕ ಅನಿಲಗಳ ಬೆಲೆ ಹೆಚ್ಚಳವಾಗಲಿದೆ. ಅಲ್ಲದೆ, ಲೋಹಗಳು ಮತ್ತು ಕೃಷಿ ಕಚ್ಚಾ ವಸ್ತುಗಳ ಬೆಲೆ ಸ್ಥಿರವಾಗಿರುವ ನಿರೀಕ್ಷೆ ಇದೆ. ಕಬ್ಬಿಣ, ಅದಿರು ಮತ್ತು ಸತುವಿನ ಬೆಲೆಯಲ್ಲಿ ಇಳಿಕೆಯಾದ ಕಾರಣ ಇತರ ಲೋಹಗಳು ಮತ್ತು ಖನಿಜಗಳ ಬೆಲೆಯಲ್ಲಿ ಇಳಿಕೆ ನಿರೀಕ್ಷಿಸಲಾಗಿದೆ. ಭಾರತ ಆಮದು ಮಾಡಿಕೊಳ್ಳುವ ಸರಕುಗಳ ಪ್ರಮಾಣ ತಗ್ಗಿದ್ದು, ದೇಶೀಯ ಹಣದುಬ್ಬರ ನಿಯಂತ್ರಣದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

Gold Silver

ದೊಡ್ಡ ಏರಿಕೆ ದಾಖಲಿಸಿದ ಷೇರುಪೇಟೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ಬೆಳವಣಿಗೆಗೆ ಪೂರಕವಾದ ಬಜೆಟ್​ನ ಮುನ್ಸೂಚನೆ ನೀಡಿದ್ದರಿಂದ ಭಾರತೀಯ ಷೇರುಪೇಟೆ ದೊಡ್ಡ ಪ್ರಮಾಣದ ಏರಿಕೆ ದಾಖಲಿಸಿತು. ಷೇರುಪೇಟೆ ಏರುತ್ತಿರುವುದು ಇದು ಸತತ ನಾಲ್ಕನೇ ದಿನ. ದಿನದ ಒಂದು ಹಂತದಲ್ಲಿ 846 ಅಂಕ ಏರಿಕೆಯಾಗಿ 77,605ಕ್ಕೆ ತಲುಪಿದ್ದ ಸೆನ್ಸೆಕ್ಸ್ ವಹಿವಾಟಿನ ಅಂತ್ಯದಲ್ಲಿ 740 ಅಂಕ ಏರಿಕೆಯಾಗಿ 77,500ಕ್ಕೆ ಸ್ಥಿರಗೊಂಡಿತು. ನಿಫ್ಟಿ 258 ಅಂಕ ಹೆಚ್ಚಳವಾಗಿ 23,508ಕ್ಕೆ ಸ್ಥಿರವಾಯಿತು. ಲಾರ್ಸೆನ್ ಆಂಡ್ ಟೂಬ್ರೊ ಡಿಸೆಂಬರ್​ಗೆ ಅಂತ್ಯವಾದ ತ್ರೖೆಮಾಸಿಕ ಅವಧಿಯಲ್ಲಿ 3,359 ಕೋಟಿ ರೂ. ಲಾಭ ಗಳಿಸಿರುವುದನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಅದರ ಷೇರುಗಳಿಗೆ ಶುಕ್ರವಾರ ಭಾರಿ ಬೇಡಿಕೆ ಉಂಟಾಯಿತು. 688 ಕೋಟಿ ರೂ. ಲಾಭ ಪ್ರಕಟಿಸಿದ ನೆಸ್ಲೆಗೂ ಸಾಕಷ್ಟು ಬೇಡಿಕೆ ಕುದುರಿತು. ಇಂಡಸ್​ಇಂಡ್ ಬ್ಯಾಂಕ್, ಟೈಟನ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಐಟಿಸಿ, ಮಾರುತಿ ಷೇರುಗಳು ಲಾಭ ಮಾಡಿದವು. ಐಟಿಸಿ ಹೋಟೆಲ್ಸ್, ಭಾರ್ತಿ ಏರ್​ಟೆಲ್, ಬಜಾಜ್ ಫಿನ್​ಸರ್ವ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದವು. ಜನವರಿ ತಿಂಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 638 ಅಂಕ ಇಳಿಕೆಯಾಗಿದ್ದು, ನಿಫ್ಟಿ 136 ಅಂಕ ಕುಸಿದಿದೆ.

ಔಷಧ ಕ್ಷೇತ್ರದಲ್ಲಿ ನಾವೀನ್ಯ: ಔಷಧ ಕ್ಷೇತ್ರದಲ್ಲಿ ನಾವೀನ್ಯಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯ ವರದಿ ತಿಳಿಸಿದೆ. ಅಲ್ಲದೆ, ಹೊಸ ಔಷಧಗಳ ಅಭಿವೃದ್ಧಿ, ಜೈವಿಕ ಔಷಧಗಳ ಸಂಶೋಧನೆ ಮತ್ತು ಅಭಿವೃಧಿ್ಧೆ ಖರ್ಚು ಮಾಡುವುದರಲ್ಲಿ ಭಾರತ ಜಾಗತಿಕವಾಗಿ ಹಿಂದುಳಿದಿದೆ ಎಂದೂ ವರದಿ ಬೊಟ್ಟು ಮಾಡಿದೆ. 2024ರ ಆರ್ಥಿಕ ವರ್ಷದಲ್ಲಿ ವಾರ್ಷಿಕವಾಗಿ ಔಷಧ ಕ್ಷೇತ್ರದಲ್ಲಿ 4.17 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ಐದು ವರ್ಷಗಳಿಂದ ಶೇ.10.1ರಷ್ಟು ಏರಿಕೆ ಕಂಡಿದೆ.

Share Market
ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳು
  • ಜಾಗತಿಕ ಅನಿಶ್ಚಿತತೆ ನಡುವೆಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ದೇಶದ ಜಿಡಿಪಿ ಬೆಳವಣಿಗೆ ಶೇ. 6.4ರಷ್ಟಿದೆ.
  • 2025-26ನೇ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 6.3ರಿಂದ ಶೇ.6.8ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
  • ಸಾರ್ವಜನಿಕ ಬಂಡವಾಳ ವೆಚ್ಚ ಮತ್ತು ವಾಣಿಜ್ಯ ಹಾಗೂ ವ್ಯಾಪಾರದ ನಿರೀಕ್ಷೆ ಸುಧಾರಿಸುವ ಹೂಡಿಕೆ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ.
  • ಮುಂದಿನ ಎರಡು ದಶಕಗಳ ಕಾಲ ಮೂಲಸೌಕರ್ಯ ರಂಗದಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕಿದೆ. ಕಳೆದ 5 ವರ್ಷಗಳಲ್ಲಿ ಸರ್ಕಾರವು ಭೌತಿಕ ಸಂಪರ್ಕ, ಡಿಜಿಟಲ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದೆ. ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ, ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಬೇಕಿದೆ.
  • ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂಥ ಕೆಲವು ರಾಜ್ಯಗಳು ಕೈಗಾರಿಕಾ ವಲಯದಲ್ಲಿ ಜನರಿಗೆ ಆದಾಯವನ್ನು ಸೃಷ್ಟಿಸಲು ಸಮರ್ಥವಾಗಿವೆ.
  • ಸೇವಾ ಆಧಾರಿತ ವಲಯ ಬೆಳವಣಿಗೆಯಾಗುತ್ತಿದೆ. ಕೃತಕ ಬುದ್ಧಿಮತ್ತೆಯ (ಎಐ) ಪ್ರಭಾವ ಇದಕ್ಕೆ ಪೂರಕವಾಗಿ ಪರಿಣಮಿಸಿದೆ.
  • ಕಾರ್ಪೆರೇಟ್ ವಲಯವು ಉನ್ನತ ಮಟ್ಟದ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು.
  • ಗ್ರಾಮೀಣ ಪ್ರದೇಶದ ಬೇಡಿಕೆಯು ದೇಶದ ಅರ್ಥವ್ಯವಸ್ಥೆಗೆ ಚಾಲನಾ ಶಕ್ತಿಯಾಗಿ ಇರಲಿದೆ.
  • ನಿರುದ್ಯೋಗ ಪ್ರಮಾಣ ಇಳಿಕೆಯಾಗಿದ್ದು, ಹಣಕಾಸು ವರ್ಷ 2024ರಲ್ಲಿ 3.2%ಕ್ಕೆ ತಲುಪಿದೆ.
  • ದೇಶದ ವಿದೇಶಿ ವಿನಿಮಯ 640.3 ಶತಕೋಟಿ ಡಾಲರ್ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net