

ಬೈಂದೂರು: ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಅ.3 ರಿಂದ 12ರ ತನಕ ಅದ್ದೂರಿಯ ಬೈಂದೂರು ದಸರಾ ನಡೆಯಲಿದೆ ಎಂದು ಬೈಂದೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ನೆಲ್ಯಾಡಿ ದೀಪಕ್ಕುಮಾರ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ವರ್ಷ ಸುವರ್ಣ ಮಹೋತ್ಸವದ ಬೈಂದೂರು ದಸರಾ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಸಾರ್ವಜನಿಕರ ಸಹಕಾರದೊಂದಿಗೆ ವಿಭಿನ್ನವಾಗಿ ಬೈಂದೂರು ದಸರಾ ನಡೆಯಲಿದೆ. ಮೊದಲಿನ ಐದು ದಿನಗಳು ಬೈಂದೂರು ಪರಿಸರದ ಗ್ರಾಮಗಳಲ್ಲಿ ಸಾಂಸ್ಕೃತಿಕ ವೈಭವ ಹಾಗೂ ದಸರಾ ಕ್ರೀಡಾಕೂಟ ನಡೆಯಲಿವೆ ಎಂದರು.
ಅ.9ರಿಂದ 12ರ ತನಕ ಬೈಂದೂರು ಶ್ರೀಸೇನೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಶಾರದಾ ಪ್ರತಿಷ್ಠಾಪನೆ ಜತೆಗೆ ಸಾರ್ವಜನಿಕ ಶಾರದೋತ್ಸವ, ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಮಿತಿ ಪೂರ್ವಾಧ್ಯಕ್ಷರು ಹಾಗೂ ಸ್ವಯಂಸೇವಕರ ಸಹಕಾರದಲ್ಲಿ ಉತ್ಸವದ ತಯಾರಿ ಭರದಿಂದ ಸಾಗುತ್ತಿದೆ ಎಂದರು.
ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ, ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೈಂದೂರು, ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ, ಪದಾಧಿಕಾರಿಗಳಾದ ನಿತಿನ್ ಬೈಂದೂರು, ದಯಾನಂದ ಪಿ. ಬೈಂದೂರು, ರಾಘವೇಂದ್ರ ಮೊಗವೀರ, ಸೀತಾರಾಮ ಮೊಗವೀರ, ಗುರುಪ್ರಸಾದ ಎಚ್. ಬೈಂದೂರು ಗೋಷ್ಠಿಯಲ್ಲಿದ್ದರು.