

Udhayanidhi Stalin: ತಮಿಳುನಾಡಿನ ಹೋರಾಟದ ಫಲವಾಗಿಯೇ ರಾಜ್ಯಪಾಲ ಆರ್.ಎನ್.ರವಿ ಈಗ ತಮಿಳು ಮಾತನಾಡಲು ಕಲಿಯುತ್ತಿದ್ದಾರೆ. ಇಲ್ಲದಿದ್ದರೇ ನಾವೆಲ್ಲರೂ ಈಗ ಹಿಂದಿ ಮಾತನಾಡುತ್ತಿದ್ದೆವು ಎಂದು ಚೆನ್ನೈನಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
‘ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಡಿಎಂಕೆ ಸರ್ಕಾರದ ಘೋಷಣೆಯನ್ನು ಟೀಕಿಸಿದ್ದ ರಾಜ್ಯಪಾಲ ಆರ್.ಎನ್.ರವಿ ತಮಿಳುನಾಡು ಈಗ ಯಾರೊಂದಿಗೆ ಹೋರಾಡುತ್ತಿದೆ? ಎಂದು ಪ್ರಶ್ನಿಸಿದ್ದರು.
ಈ ಕುರಿತು ಮಾರ್ಕ್ಸ್ವಾದಿ-ಪೆರಿಯಾರಿಸ್ಟ್ ಪೊತುವುಡೈಮೈ ಕಚ್ಚಿಯ ದಿವಂಗತ ನಾಯಕ ವಿ. ಅನೈಮುತ್ತು ಅವರ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಉದಯನಿಧಿ, ರವಿಯವರು ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ, ಅದು ಡಿಎಂಕೆಗೆ ಮಾತ್ರ ಅನುಕೂಲಕರವಾಗಿರುತ್ತದೆ ಎಂದು ಹೇಳಿದ್ದಾರೆ.
ತಮಿಳುನಾಡು ಸಾಮಾಜಿಕ ನ್ಯಾಯ ಮತ್ತು ರಾಜ್ಯದ ಹಕ್ಕುಗಳಿಗಾಗಿ ಹೋರಾಡುತ್ತದೆ. ಅದು ಕೋಮುವಾದ, ಜಾತಿವಾದ ಹಾಗೂ ಹಿಂದಿ ಹೇರಿಕೆಯ ವಿರುದ್ಧ ಹೋರಾಡುತ್ತದೆ. ಒಟ್ಟಾರೆಯಾಗಿ ತಮಿಳುನಾಡು ಫ್ಯಾಸಿಸ್ಟ್ ಬಿಜೆಪಿಯ ವಿರುದ್ಧ ಹೋರಾಡುತ್ತದೆ. ಎಂದು ಉದಯನಿಧಿ ಪ್ರತಿಪಾದಿಸಿದ್ದಾರೆ.
ಬಿಜೆಪಿಗೆ ಹಳೆಯ ಗುಲಾಮರು ಸಾಕಾಗುವುದಿಲ್ಲ, ಆದ್ದರಿಂದ ಅವರು ಹೊಸ ಗುಲಾಮರನ್ನು ಹುಡುಕುತ್ತಿದ್ದಾರೆ. ಬಿಜೆಪಿ ಎಷ್ಟೇ ಗುಲಾಮರೊಂದಿಗೆ ಕೈಜೋಡಿಸಿದರೂ, 2026ರ ವಿಧಾನಸಭಾ ಚುನಾವಣೆಗಳು ತಮಿಳುನಾಡು ಸ್ವಾಭಿಮಾನದ ಭೂಮಿ ಎಂಬುದನ್ನು ಸಾಬೀತುಪಡಿಸುತ್ತದೆ. ಬಿಜೆಪಿ ಇಲ್ಲಿ ನೇರವಾಗಿ ಜನರ ಬೆಂಬಲವನ್ನು ಪಡೆಯಲು ಸಾಧ್ಯವಾಗದ ಕಾರಣ, ಅದು ಎಐಎಡಿಎಂಕೆಯನ್ನು ಬೆದರಿಸುವ ಮೂಲಕ ಅವರ ಹೆಗಲ ಮೇಲೆ ಸವಾರಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಸ್ವಾಭಿಮಾನ ಚಳವಳಿಯ ಶತಮಾನೋತ್ಸವವನ್ನು ಸಹ ಆಚರಿಸುತ್ತಿದ್ದೇವೆ, ಆದರೆ (ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ) ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸ್ವಾಭಿಮಾನದ ಕಿಂಚಿತ್ತೂ ಇಲ್ಲ. ಎಐಎಡಿಎಂಕೆಯನ್ನು ಬಾಡಿಗೆಗೆ ಪಡೆದಿರುವ ಅವರು, ಈಗ ಅದನ್ನು ಇತರರಿಗೆ ಉಪ ಗುತ್ತಿಗೆ ನೀಡಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)