ಮುತ್ತಿನಂತ ಮಾತಿಗೆ ಮರುಳಾದ! 24,000 ರೂ. ಬಿಲ್​ ಕಂಡು ದಂಗಾದ;​ ನೀವಿಂಥ ಮೋಸದ ಜಾಲಕ್ಕೆ ಬೀಳದಿರಿ | Dating App Scam

ವಿಜಯವಾಣಿ (19)
Published on

Dating App Scam: ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ವಂಚನೆಗಳು ವ್ಯಾಪಕವಾಗಿವೆ. ಪ್ರತಿದಿನ ಮಾಧ್ಯಮಗಳು ಮತ್ತು ಸುದ್ದಿ ಪತ್ರಿಕೆಗಳಲ್ಲಿ ಒಂದಲ್ಲ ಒಂದು ಪ್ರಕರಣಗಳು ವರದಿ ಆಗುತ್ತಲೇ ಇರುತ್ತವೆ. ಇಷ್ಟಾದರೂ ಸಹ ಎಚ್ಚೆತ್ತುಕೊಳ್ಳದ ಜನ, ಪದೇ ಪದೇ ಇಂತಹ ಮೋಸದ ಜಾಲಕ್ಕೆ ಹೋಗಿ ಬೀಳುವುದು ದುರಂತವೇ ಸರಿ. ಸದ್ಯ ಇಲ್ಲೊಂದು ಘಟನೆ ಕೂಡ ಅದನ್ನೇ ಹೇಳಿದ್ದು, ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ ಯುವತಿಯಿಂದ ತನಗಾದ ದ್ರೋಹದ ಬಗ್ಗೆ ಯುವಕನೊಬ್ಬ ಜಾಲತಾಣದಲ್ಲಿ ಘಟನೆಯನ್ನು ವಿವರಿಸಿದ್ದಾನೆ.

ಈ ಕುರಿತು 'ರೆಡ್ಡಿಟ್‌'ನಲ್ಲಿ ಹಂಚಿಕೊಂಡಿರುವ ಯುವಕ, "ಡೇಟಿಂಗ್ ಆ್ಯಪ್​ನಲ್ಲಿ ಓರ್ವ ಯುವತಿಯನ್ನು ಭೇಟಿಯಾದೆ. ಕೆಲ ಸಮಯ ಅವಳೊಂದಿಗೆ ಸಂಭಾಷಣೆ ಕೂಡ ನಡೆಸಿದೆ. ಅಂದು ವೀಕೆಂಡ್​ ಆಗಿದ್ದ ಕಾರಣ, ಆಕೆ ನನ್ನನ್ನು ಥಾಣೆಯ ಉಪ್ವಾನ್ ಕೆರೆಯ ಬಳಿಯಿರುವ 'ಪಾಬ್ಲೊ ಬಾರ್ ಮತ್ತು ಲೌಂಜ್​'ಗೆ ಬರುವಂತೆ ಹೇಳಿದಳು. ಅಂತೆಯೇ, ತಡರಾತ್ರಿ ನಾನು ಕೂಡ ಅಲ್ಲಿಗೆ ಹೋದೆ" ಎಂದಿದ್ದಾನೆ.

ಮುತ್ತಿನಂತ ಮಾತೇ ಮುಳ್ಳು

ಘಟನೆಯನ್ನು ವಿವರಿಸಿದ ಆತ, “ಸನ್ನಿ (ಯುವತಿ) ಮತ್ತು ನಾನು ಕೆಲ ಸಮಯ ಒಳ್ಳೆಯ ಸಂಭಾಷಣೆಯನ್ನೇ ನಡೆಸಿದೆವು. ನಾನು ಬಿಯರ್​ ತೆಗೆದುಕೊಂಡರೆ, ಅವಳು ಎಷ್ಟು ಪ್ರಮಾಣದಲ್ಲಿ ಮದ್ಯವನ್ನು ಆರ್ಡರ್​ ಹೇಳಬೇಕು ಎಂದು ಚಿಂತಿಸದೆ, ಬ್ಲೂ ಲೇಬಲ್‌ಗಳನ್ನು ಒಂದರಂತೆ ಒಂದು ಟೇಬಲ್​ಗೆ ತರಲು ಹೇಳಿದಳು. ಆಗ ನನಗೆ ಏನು ತಿಳಿಯಲಿಲ್ಲ. ಆದರೆ, ಬಿಲ್ ಕೈಗೆ ಬಂದಾಗ ಬೆರಗಾದೆ. ಕಾರಣ, ಬಿಲ್​ ನಾವು ತೆಗೆದುಕೊಂಡ ಐಟಂಗಳಿಗೆ 24,000 ರೂ. ಹಾಕಲಾಗಿತ್ತು. ಅದರಲ್ಲಿ ಸರ್ವಿಸ್​ ಚಾರ್ಚ್​ಗೆ ಪ್ರತ್ಯೇಕ 2,000 ರೂ. ಹಾಕಿದ್ದರು. ಅಸಲಿಗೆ ಆ ಬಿಲ್​ನಲ್ಲಿ 2,000 ಬಿಟ್ಟರೆ, ಇನ್ನೆಲ್ಲ ಮೊತ್ತವು ಆಕೆ ಆರ್ಡರ್​ ಮಾಡಿದ್ದ ಬ್ಲೂ ಲೇಬಲ್‌ಗೆ ತಗುಲಿತ್ತು" ಎಂದು ಹೇಳಿಕೊಂಡಿದ್ದಾನೆ.

'ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಪ್ರಶ್ನಿಸೋಣ ಎಂದರೆ ಪರಿಸ್ಥಿತಿ ಕಂಡು ಭಯದ ಭೀತಿ ಮೂಡಿತು. ಜಗಳ ಸೃಷ್ಟಿಸಿ, ಇನ್ಯಾವುದೋ ಸಂಕಷ್ಟಕ್ಕೆ ಸಿಲುಕುವ ಬದಲಿಗೆ 10,000 ರೂ. ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡುವುದೇ ಉತ್ತಮ ಪರಿಹಾರ ಎಂದು ಭಾವಿಸಿದೆ. ಬಿಲ್​ ನನ್ನ ಕೈಗೆ ಬರುತ್ತಿದ್ದಂತೆ ಆಕೆ ಹೆಚ್ಚು ಸಮಯ ಕೂರದೆ, ತಡವಾಯಿತು ನಾನು ಹೊರಡುವೆ ಎಂದು ಕಾಲ್ಕಿತ್ತಳು. ಇದು ಡೇಟಿಂಗ್ ಆ್ಯಪ್​ನ ಹಗರಣ ಅನ್ನೋದು ನನಗೆ ಸ್ಪಷ್ಟವಾಯಿತು" ಎಂದು ಬರೆದುಕೊಂಡಿದ್ದಾನೆ.

Got scammed through dating app byu/xXSEKIROXx inmumbai

ಯುವಕನ ಡೇಟಿಂಗ್ ಆ್ಯಪ್​ ಸ್ಕ್ಯಾಮ್​ ಸ್ಟೋರಿ ಕೇಳ್ತಿದ್ದಂತೆ ಹಲವರು ಈತನ ವಿರುದ್ಧ ಕಿಡಿಕಾರಿದ್ದಾರೆ. ನೀವ್ಯಾಕೆ ನ್ಯೂಸ್ ನೋಡೋದಿಲ್ವಾ? ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದೆಲ್ಲ ಕಮೆಂಟ್​ ಮೂಲಕ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net