

Terror attack: ವಾಯುವ್ಯ ಪಾಕಿಸ್ತಾನದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಕನಿಷ್ಠ ಏಳು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದು, ಆರು ಉಗ್ರರು ಹತರಾಗಿದ್ದಾರೆ ಎಂದು ಶನಿವಾರ(ಅ. 11) ವರದಿಯಾಗಿದೆ.
ಶುಕ್ರವಾರ ರಾತ್ರಿ ಡೇರಾ ಇಸ್ಮಾಯಿಲ್ ಖಾನ್ ನಗರದ ಹೊರವಲಯದಲ್ಲಿರುವ ರಟ್ಟಾ ಕುಲಾಚಿಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ. ಮೊದಲು ಆತ್ಮಹತ್ಯಾ ಬಾಂಬರ್ ಗೇಟ್‌ನಲ್ಲಿ ಸ್ಫೋಟಕಗಳಿಂದ ತುಂಬಿದ ಟ್ರಕ್ ಅನ್ನು ಸ್ಫೋಟಿಸಿದ ಬಳಿಕ ಒಳಗೆ ನುಗ್ಗಿ ಉಗ್ರರು ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಡೇರಾ ಇಸ್ಮಾಯಿಲ್ ಖಾನ್ ಪೊಲೀಸ್ ಮುಖ್ಯಸ್ಥ ಸಜ್ಜದ್ ಅಹ್ಮದ್, ಮೊದಲು ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡ ನಂತರ ಸುಮಾರು 200 ಉಗ್ರರು ತರಬೇತಿ ಕೇಂದ್ರಕ್ಕೆ ನುಗ್ಗಿ ದಾಳಿ ಮಾಡಿದ್ದಾರೆ. ಪೊಲೀಸರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಸುಮಾರು ಆರು ಗಂಟೆಗಳ ಕಾಲ ನಡೆಯಿತು. ಏಳು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು ಮತ್ತು 13 ಮಂದಿ ಗಾಯಗೊಂಡರು. ಪ್ರತಿಯಾಗಿ ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಮೃತ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಶ್ಲಾಘಿಸಿದ್ದಾರೆ. ನಿಷೇಧಿತ ಗುಂಪು, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಆರಂಭದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ನಂತರ ನಾವು ದಾಳಿ ನಡೆಸಿಲ್ಲ ಎಂದು ಮೊದಲಿನ ಹೇಳಿಕೆಯನ್ನು ಹಿಂಪಡೆದಿದೆ. ಈ ಗುಂಪು 2021ರಲ್ಲಿ ಕಾಬೂಲ್‌ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಅಫ್ಘಾನ್ ತಾಲಿಬಾನ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ, ಆದರೆ ಅದರಿಂದ ಪ್ರತ್ಯೇಕವಾಗಿದೆ ಎಂದು ತಿಳಿದು ಬಂದಿದೆ.(ಏಜೆನ್ಸೀಸ್)