ಸಿಸಿಬಿ ದಾಳಿ: ಬೆಂಗಳೂರಲ್ಲಿ ನಾಲ್ವರು ಡ್ರಗ್ಸ್​​ ಪೆಡ್ಲರ್‌ಗಳ ಬಂಧನ

drug peddler
Published on

ಬೆಂಗಳೂರು: ವಿದ್ಯಾರ್ಥಿಗಳು, ಐಟಿ/ಬಿಟಿ ನೌಕರರಿಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ 22 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಆದೀಶ್, ವಾಸೀಂ, ಸೈಯದ್ ಮತ್ತು ನೈಜೀರಿಯಾ ಪ್ರಜೆ ಬಂಧಿತರು. 22 ಲಕ್ಷ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಕ್ರಿಸ್ಟಿಲ್, ಕೊಕೇನ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯ ಖರೀದಿ ಮಾಡುತ್ತಿದ್ದ ಆರೋಪಿಗಳು, ಸಣ್ಣ ಸಣ್ಣ ಪೊಟ್ಟಣದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಮಾರತ್‌ಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಇಂದಿರಾನಗರ, ಮೈಕೋ ಲೇಔಟ್ ಠಾಣೆ ವ್ಯಾಪ್ತಿಯ ಪರಿಚಿತ ವ್ಯಸನಿಗಳು, ವಿದ್ಯಾರ್ಥಿಗಳು ಮತ್ತು ಸಾಫ್ಟ್​ವೇರ್ ಉದ್ಯೋಗಿಗಳನ್ನೇ ಟಾರ್ಗೆಟ್ ಮಾಡಿದ್ದರು.

ಇದರ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕಾರ್ಯಾಚರಣೆ ನಡೆಸಿದಾಗ ರೆಡ್‌ಹ್ಯಾಂಡ್ ಆಗಿ ಸೆರೆಸಿಕ್ಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net