ಪಿಯು ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆ: ಎಸ್​ಎಸ್​ಸಿಯಿಂದ 4,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

job
Published on

ನವದೆಹಲಿ: ಪಿಯು ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆ/ಸಚಿವಾಲಯ, ಸಂಸ್ಥೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿಗೆ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು (ಎಸ್​ಎಸ್​ಸಿ) ಅರ್ಜಿ ಆಹ್ವಾನಿಸಿದೆ. ಕಂಬೈನ್ಡ್​ ಹೈಯರ್​ ಸೆಕೆಂಡರಿ (ಸಿಎಚ್​ಎಸ್​) ಲೆವೆಲ್​ ಪರೀಕ್ಷೆಗೆ ಎಸ್​ಎಸ್​ಸಿ ಅಧಿಸೂಚನೆ ಹೊರಡಿಸಿದೆ.

ನೇಮಕಾತಿ ಪ್ರಕ್ರಿಯೆಗೆ ಒಟ್ಟು 4500 ಹುದ್ದೆಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲೂ ಹಲವು ಹುದ್ದೆಗಳಿವೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.

ಹುದ್ದೆಗಳು: ಜೂನಿಯರ್​ ಸೆಕ್ರೆಟರಿಯೇಟ್​ ಅಸಿಸ್ಟೆಂಟ್​ (ಎಲ್​ಡಿಸಿ), ಡೇಟಾ ಎಂಟ್ರಿ ಆಪರೇಟರ್​ ಮತ್ತು ಡೇಟಾ ಎಂಟ್ರಿ ಆಪರೇಟರ್​ ಗ್ರೇಡ್​ ಎ ವಿಭಾಗಗಳಲ್ಲಿ ನೇಮಕ ನಡೆಯುತ್ತಿದೆ. ಹುದ್ದೆಗಳಿಗೆ ಅನುಸಾರ 19,900ರಿಂದ 92,000 ರೂ.ವರೆಗೆ ಮಾಸಿಕ ವೇತನ ಇರಲಿದೆ. 18ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, 100 ರೂ. ಶುಲ್ಕ ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಎರಡು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಹಾಗೂ ಟೈಪಿಂಗ್​ ಪರೀಕ್ಷೆ ನಡೆಸಲಾಗುತ್ತದೆ.

ರಾಜ್ಯದ ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಅರ್ಜಿ ಸಲ್ಲಿಕೆಗೆ ಜ.4 ಕೊನೆಯ ದಿನ: ಅರ್ಜಿ ಸಲ್ಲಿಸಲು ಜನವರಿ 4 ಕೊನೆಯ ದಿನವಾಗಿದೆ. ಅರ್ಜಿ ತಿದ್ದುಪಡಿಗೆ ಜ.9ರವರೆಗೆ ಅವಕಾಶ ನೀಡಲಾಗಿದೆ. 2023ರ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಮೊದಲ ಹಂತದ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್​ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿರಲಿದೆ. ಮಾಹಿತಿಗೆ: https://ssc.nic.in/ ಸಂಪರ್ಕಿಸಿ.

4,791 ಅಭ್ಯರ್ಥಿಗಳ ಆಯ್ಕೆ: 2020ರ ಆವೃತ್ತಿಯ ಫಲಿತಾಂಶ ಪ್ರಕಟ

ಎಸ್​ಎಸ್​ಸಿ 2020ರ ಆವೃತ್ತಿಯ ಸಿಎಚ್​ಎಸ್​ ಪರೀೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಲಭ್ಯವಿದ್ದ 4791 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿವಿಧ ವರ್ಗದಲ್ಲಿ ಎರಡನೇ ಹಂತದ ಪರೀಕ್ಷೆಯಲ್ಲಿ ಕಟ್​ ಆಫ್​​ ಅಂಕಗಳು, ಅಭ್ಯರ್ಥಿಗಳ ಜನ್ಮ ದಿನಾಂಕವಾರು ವಿವರಗಳನ್ನು ಪ್ರಕಟಿಸಿದೆ. 40ಕ್ಕೂ ಅಧಿಕ ಇಲಾಖೆಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾಗಿದೆ. ಇದರ ಜತೆಗೆ, 95 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಎಸ್​ಎಸ್​ಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net