ಮೊರ್ಬಿ ಸೇತುವೆ ದುರಂತದ ವೇಳೆ ನದಿಗೆ ಜಿಗಿದು ಜನರನ್ನು ರಕ್ಷಿಸಿದ್ದ ಬಿಜೆಪಿ ಅಭ್ಯರ್ಥಿ ಗೆಲುವು

BJP leads in Morbi
Published on

ಅಹಮದಾಬಾದ್​: ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಮ್ಯಾಜಿಕ್​ ಅಂಕಿ ದಾಟಿರುವ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಭಾರೀ ಕುತೂಹಲ ಮೂಡಿಸಿದ್ದ ಮೊರ್ಬಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಗೆಲುವು ಸಾಧಿಸಿದ್ದಾರೆ.

ಕಳೆದ ಅಕ್ಟೋಬರ್‌ 30ರಂದು ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ದುರಂತದಲ್ಲಿ 40 ಮಕ್ಕಳು ಸೇರಿ 140ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಆಡಳಿತಾರೂಢ ಬಿಜೆಪಿಯನ್ನು ಕಾಂಗ್ರೆಸ್ ತೀವ್ರ ಟೀಕೆಗೆ ಒಳಪಡಿಸಿತ್ತು. ಮೊರ್ಬಿ ವಿಧಾನಸಭಾ ಕ್ಷೇತ್ರದಿಂದ ಜಯಂತಿ ಪಟೇಲ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಮತ್ತೊಂದೆಡೆ ಎಎಪಿ ಪಂಕಜ್ ರಂಸಾರಿಯಾ ಅವರನ್ನು ಕಣಕ್ಕಿಳಿಸಿತ್ತು. ಮೊರ್ಬಿ ಸೇತುವೆ ದುರಂತ ಪ್ರಕರಣ ಬಿಜೆಪಿ ಪಾಲಿಗೆ ಈ ಬಾರಿ ಮುಳುವಾಗಲಿದೆ ಎಂದೇ ಕಾಂಗ್ರೆಸ್​ ಮತ್ತು ಎಎಪಿ ಲೆಕ್ಕಾಚಾರ ಹಾಕಿದ್ದವು. ಆದರೆ ಅದೆಲ್ಲವೂ ಉಲ್ಟಾ ಆಗಿದೆ.

ಆದರೆ ಮೊರ್ಬಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾಗೆ ಮತದಾರರು ಮನ್ನಣೆ ನೀಡಿದ್ದಾರೆ. ಮೊರ್ಬಿಯಲ್ಲಿ ಸೇತುವೆ ಕುಸಿದು ನದಿಗೆ ಬಿದ್ದ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ವತಃ ಅಮೃತಿಯಾ ಕೂಡ ಇದ್ದರು. ನೀರಿಗೆ ಇಳಿದು ಜನರನ್ನು ರಕ್ಷಿಸಿದ್ದರು. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಮತ ಎಣಿಕೆ ದಿನವೂ ಈ ದೃಶ್ಯ ವೈರಲ್​ ಆಗುತ್ತಿದ್ದು, ಜನರ ಪ್ರಾಣ ಉಳಿಸಲು ನೀರಿಗಿಳಿದ ಅಮೃತಿಯಾಗ ಜನರು ಆಶೀರ್ವದಿಸಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್​ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ವಿುಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗುಸೇತುವೆ ಕುಸಿದ ದುರಂತದಲ್ಲಿ ರಾಜ್‌ಕೋಟ್ ಲೋಕಸಭಾ ಕ್ಷೇತ್ರದ ಸದಸ್ಯ ಮೋಹನ್ ಕುಂದರಿಯಾ ಅವರ 12 ಸಂಬಂಧಿಕರೂ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net