ದೇವಸ್ಥಾನದ ಬಳಿ ಗೃಹರಕ್ಷಕಿ ಜತೆ ಅಸಭ್ಯವಾಗಿ ವರ್ತಿಸಿದವನ ಬಂಧನ

Handcuffed
Person in handcuffs
Published on

ಬೆಂಗಳೂರು: ನಗರದ ಉಪ್ಪಾರಪೇಟೆಯ ಬಿ.ಟಿ.ರಸ್ತೆಯಲ್ಲಿರುವ ಗಣೇಶ ದೇವಾಲಯದ ಬಳಿ ಕರ್ತವ್ಯನಿರ್ವಹಿಸುತ್ತಿದ್ದ ಗೃಹರಕ್ಷಕಿ(ಹೋಂಗಾರ್ಡ್​) ಜೊತೆ ಅಸಭ್ಯವಾಗಿ ವರ್ತಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ದೇವರಾಜ್(39) ಬಂಧಿತ.

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೆ.10 ರಂದು 37 ವರ್ಷದ ಮಹಿಳಾ ಗೃಹರಕ್ಷಕಿಯನ್ನು ಬಿ.ಟಿ.ರಸ್ತೆಯಲ್ಲಿರುವ ಗಣೇಶ ದೇವಾಲಯದ ಬಳಿ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಆರೋಪಿ ದೇವರಾಜ್ ಕುಡಿದ ಮತ್ತಿನಲ್ಲಿ ಗೃಹರಕ್ಷಕಿಗೆ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಬೇರೆ ಯಾರಿಗೋ ಸನ್ನೆ ಮಾಡಿರಬಹುದು ಎಂದು ಗೃಹರಕ್ಷಕಿ ಸುಮ್ಮನಾಗಿದ್ದರು. ನಂತರ ಆರೋಪಿಯು ಗೃಹರಕ್ಷಕಿಯ ಕೈಯನ್ನು ಬಲವಂತವಾಗಿ ಹಿಡಿದು, ಬಟ್ಟೆಯನ್ನು ಎಳೆದು ಸಾರ್ವಜನಿಕ ಪ್ರದೇಶದಲ್ಲಿ ಅವರ ಮಾನಕ್ಕೆ ಧಕ್ಕೆ ಉಂಟುಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದೇವರಾಜ್​ನ ವರ್ತನೆಯನ್ನು ಗಮನಿಸಿದ್ದ ಸಾರ್ವಜನಿಕರು ಅವನನ್ನು ಹಿಡಿದಿದ್ದರು. ಗೃಹರಕ್ಷಕಿಯು ಉಪ್ಪಾರ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಹೊಯ್ಸಳದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ದೇವರಾಜ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು ಎನ್ನಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿಯು, ದೇವಾಲಯಕ್ಕೆ ಬರುತ್ತಿದ್ದ ಮಹಿಳೆಯರ ಜೊತೆಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net