ಗೋಮೂತ್ರದಿಂದ ರೋಗಗಳು ಗುಣವಾಗುತ್ತವೆ! ಮದ್ರಾಸ್ ಐಐಟಿ ನಿರ್ದೇಶಕನಿಂದ ಅಚ್ಚರಿ ಹೇಳಿಕೆ | Cow urine

Cow urine
Published on

Cow urine : ಗೋಮೂತ್ರ ಕುಡಿಯುವುದರಿಂದ ರೋಗಗಳು ಬೇಗನೆ ಗುಣವಾಗುತ್ತವೆ ಎಂದು ಹೇಳಿಕೆ ನೀಡುವ ಮೂಲಕ ಮದ್ರಾಸ್ ಐಐಟಿ ನಿರ್ದೇಶಕ ವಿ. ಕಾಮಕೋಟಿ ಅವರು ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಕೃತಕ ಬುದ್ಧಿಮತ್ತೆ ತಜ್ಞರಲ್ಲಿ ಒಬ್ಬರಾದ ವಿ. ಕಾಮಕೋಟಿ ಅವರು ಪೊಂಗಲ್ ಸಂದರ್ಭದಲ್ಲಿ ಚೆನ್ನೈನ ಮಾಂಬಲಂನಲ್ಲಿ ನಡೆದ ಗೋಪೂಜೆ ಸಮಾರಂಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ತಂದೆಗೆ ಜ್ವರ ಬಂದಾಗ, ಸನ್ಯಾಸಿಯ ಸಲಹೆಯ ಮೇರೆಗೆ ಅವರು ಗೋಮೂತ್ರ ಕುಡಿದರು. ಇದಾದ 15 ನಿಮಿಷಗಳ ನಂತರ ಜ್ವರ ಕಡಿಮೆಯಾಯಿತು ಎಂದು ಕಾಮಕೋಟಿ ತಿಳಿಸಿದ್ದಾರೆ.

ಸಲಹೆ ಕೊಟ್ಟ ಸನ್ಯಾಸಿಯ ಹೆಸರು ತನಗೆ ನೆನಪಿಲ್ಲ. ಆದರೆ, ಗೋಮೂತ್ರವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತದೆ ಹಾಗೂ ಹೊಟ್ಟೆಯಲ್ಲಿನ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಕಾಮಕೋಟಿ ಹೇಳಿದ್ದಾರೆ. ಬೇರೆ ಯಾರೋ ಈ ಹೇಳಿಕೆಯನ್ನು ನೀಡಿದ್ದರೆ ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರಲಿಲ್ಲ. ಆದರೆ, ಸ್ವತಃ ಐಐಟಿ ನಿರ್ದೇಶಕರೇ ಈ ಹೇಳಿಕೆ ನೀಡಿರುವುದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ವಿ. ಕಾಮಕೋಟಿ ಅವರ ಹೇಳಿಕೆಗೆ ಇದೀಗ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಅವೈಜ್ಞಾನಿಕ ವಿಚಾರಗಳನ್ನು ಹರಡುವುದು ತಮ್ಮ ನಿಲುವಿಗೆ ತಕ್ಕುದಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ಕಾರ್ತಿ ಚಿದಂಬರಂ ಅವರು ಟ್ವೀಟ್​ ಮಾಡುವ ಮೂಲಕ ಟೀಕಿಸಿದ್ದಾರೆ.

ವೈಜ್ಞಾನಿಕ ಆಧಾರವಿಲ್ಲದ ವಿಷಯಗಳನ್ನು ಹರಡಬಾರದು ಅಥವಾ ಪ್ರಚಾರ ಮಾಡಬಾರದು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಕಾಮಕೋಟಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಉತ್ತಮ ಕೆಲಸಗಳನ್ನು ಮಾಡಿದ್ದರೂ, ಆಗ ಅವರನ್ನು ಹೊಗಳಲು ಹಿಂಜರಿಯುತ್ತಿದ್ದವರು ಈಗ ಅವರು ತಮ್ಮ ಅನುಭವದಿಂದ ಸತ್ಯ ಹೇಳಿದಾಗ ಟೀಕಿಸುತ್ತಿದ್ದಾರೆ ಎಂದಿದ್ದಾರೆ.

ಅಂದಹಾಗೆ ಭಾರತದ ಮೊದಲ ಸ್ವದೇಶಿ ಮೈಕ್ರೋಪ್ರೊಸೆಸರ್ 'ಶಕ್ತಿ'ಯನ್ನು ಅಭಿವೃದ್ಧಿಪಡಿಸಿದ ತಂಡದ ಪ್ರಮುಖ ಸದಸ್ಯರಾಗಿದ್ದ ವಿ. ಕಾಮಕೋಟಿ ಅವರು ವಿಶ್ವದ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net