blank

ಕರ್ನಾಟಕ ದೇಶೀಯ ಏಕದಿನ ಚಾಂಪಿಯನ್ಸ್: ಸ್ಮರಣ್ ಶತಕದ ದರ್ಬಾರ್, ರಾಜ್ಯಕ್ಕೆ 5ನೇ ಬಾರಿ ಒಲಿದ ಕಿರೀಟ

blank

ವಡೋದರ: ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಎನಿಸಿದೆ. 21 ವರ್ಷದ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ (101 ರನ್, 92 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿದ ಟೂರ್ನಿಯ 2ನೇ ಶತಕ ಹಾಗೂ ಅಭಿನವ್ ಮನೋಹರ್ (79 ರನ್, 42 ಎಸೆತ, 10 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಶನಿವಾರ ನಡೆದ 2024-25ರ ಆವೃತ್ತಿಯ ಫೈನಲ್‌ನಲ್ಲಿ ವಿದರ್ಭ ಎದುರು 36 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಕರ್ನಾಟಕ ಐದು ವರ್ಷಗಳ ನಂತರ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಂತಾಗಿದೆ. ಆರಂಭಿಕ ಧ್ರುವ ಶೋರೆ (110 ರನ್, 111 ಎಸೆತ, 8 ಬೌಂಡರಿ, 2 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಕನ್ನಡಿಗ ಕರುಣ್ ನಾಯರ್ ಸಾರಥ್ಯದ ವಿದರ್ಭ ರನ್ನರ್‌ಅಪ್‌ಗೆ ತೃಪ್ತಿಪಟ್ಟಿದೆ.

ನೂತನ ಕೋಟಂಬಿ ಮೈದಾನದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದ ವಿದರ್ಭ ಬೌಲಿಂಗ್ ಆಯ್ಕೆಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ 67 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆಗ ಜತೆಗೂಡಿದ ಆರ್. ಸ್ಮರಣ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (78 ರನ್, 74 ಎಸೆತ, 9 ಬೌಂಡರಿ, 1 ಸಿಕ್ಸರ್) 4ನೇ ವಿಕೆಟ್‌ಗೆ 160 ರನ್‌ಗಳಿಸಿ ಚೇತರಿಕೆ ಒದಗಿಸಿದರು. ಸ್ಲಾಗ್ ಓವರ್‌ಗಳಲ್ಲಿ ಅಭಿನವ್ ಮನೋಹರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 6 ವಿಕೆಟ್‌ಗೆ 348 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಪ್ರತಿಯಾಗಿ ನಾಯಕ, ಕನ್ನಡಿಗ ಕರುಣ್ ನಾಯರ್ (27) ನಿರಾಸೆ ಹೊರತಾಗಿಯೂ ಆರಂಭಿಕ ಧ್ರುವ ಶೋರೆ ಹಾಗೂ ಕೊನೆಯಲ್ಲಿ ಹರ್ಷ್ ದುಬೆ (63 ರನ್, 30 ಎಸೆತ, 5 ಬೌಂಡರಿ, 5 ಸಿಕ್ಸರ್) ಪ್ರತಿರೋಧ ತೋರಿದರು. ಅಂತಿಮವಾಗಿ ವಿದರ್ಭವನ್ನು 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಕಟ್ಟಿಹಾಕಿದ ಮಯಾಂಕ್ ಪಡೆ ಪ್ರಶಸ್ತಿ ಒಲಿಸಿಕೊಂಡಿತು. ಚೊಚ್ಚಲ ೈನಲ್‌ನಲ್ಲಿ ಕರುಣ್ ನಾಯರ್ ಪಡೆಯ ಸತತ 8 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿತು.

ಕರ್ನಾಟಕ:6 ವಿಕೆಟ್‌ಗೆ 348 (ಮಯಾಂಕ್ 32, ಪಡಿಕ್ಕಲ್ 8, ಅನೀಶ್ ಕೆವಿ 21, ಸ್ಮರಣ್ 101, ಕೆಎಲ್ ಶ್ರೀಜಿತ್ 78, ಅಭಿನವ್ 79, ಹಾರ್ದಿಕ್ ರಾಜ್ 12*, ಶ್ರೇಯಸ್ 3*, ದರ್ಶನ್ 67ಕ್ಕೆ 2, ನಚಿಕೇತ್ 68ಕ್ಕೆ 2). ವಿದರ್ಭ: 48.2 ಓವರ್‌ಗಳಲ್ಲಿ 312 (ಧ್ರುವ 110, ಯಶ್ 22, ಕರುಣ್ 27, ಯಶ್ ಕದಂ 15, ಜಿತೇಶ್ 34, ಶುಭಂ 8, ಹರ್ಷ್ 63, ದರ್ಶನ್ 11, ವಿ.ಕೌಶಿಕ್ 47ಕ್ಕೆ 3, ಅಭಿಲಾಷ್ 58ಕ್ಕೆ 3, ಪ್ರಸಿದ್ಧ 84ಕ್ಕೆ 3).

ಸ್ಮರಣ್-ಶ್ರೀಜಿತ್ ಭರ್ಜರಿ ಜತೆಯಾಟ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಮಿಂಚಿದ್ದ ದೇವದತ್ ಪಡಿಕ್ಕಲ್ (8) ನಿರಾಸೆ ಮೂಡಿಸಿದರು. ಮಯಾಂಕ್ ಅಗರ್ವಾಲ್ (32) ಹಾಗೂ ಅನೀಶ್ ಕೆವಿ (21) ಎರಡನೇ ವಿಕೆಟ್‌ಗೆ 47 ಎಸೆತಗಳಲ್ಲಿ 41 ರನ್‌ಗಳಿಸಿ ಚೇತರಿಕೆ ನೀಡಿದರು. 4 ರನ್ ಅಂತರದಲ್ಲಿ ಇವರಿಬ್ಬರ ವಿಕೆಟ್ ಪಡೆದ ವಿದರ್ಭ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಆಗ ಜತೆಯಾದ ಎಡಗೈ ಬ್ಯಾಟರ್‌ಗಳಾದ ಸ್ಮರಣ್ ಹಾಗೂ 28 ವರ್ಷದ ಶ್ರೀಜಿತ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 137 ಎಸೆತಗಳಲ್ಲಿ 160 ರನ್ ಕಸಿದರು. ಶ್ರೀಜಿತ್ ಟೂರ್ನಿಯ 2ನೇ ಶತಕ ತಪ್ಪಿಸಿಕೊಂಡರು. ಆಗ ಸ್ಮರಣ್ ಜತೆಯಾದ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ತಂಡದ ಮೊತ್ತ ಹಿಗ್ಗಿಸಿದರು. 5ನೇ ವಿಕೆಟ್‌ಗೆ ಇವರಿಬ್ಬರು 66 ಎಸೆತಗಳಲ್ಲಿ 106 ರನ್ ಕಸಿದರು. ಇದರಲ್ಲಿ ಅಭಿನವ್ ಒಬ್ಬರೇ 79 ರನ್ ಪೇರಿಸಿದರು. ಅಭಿನವ್ ಬಿರುಸಿನಾಟಕ್ಕೆ ಸಾಥ್ ನೀಡಿದ ಸ್ಮರಣ್ ಟೂರ್ನಿಯಲ್ಲಿ ಎರಡನೇ ಶತಕ ಬಾರಿಸಿದರು. 49ನೇ ಓವರ್‌ನಲ್ಲಿ ಇವರಿಬ್ಬರ ವಿಕೆಟ್ ಪಡೆದ ದರ್ಶನ್ ನಲ್ಕಂಡೆ ರಾಜ್ಯವನ್ನು 350ರೊಳಗೆ ನಿಯಂತ್ರಿಸಿದರು. ಕೊನೇ 10 ಓವರ್‌ನಲ್ಲಿ ಕರ್ನಾಟಕ ಬರೋಬ್ಬರಿ 104 ರನ್ ದೋಚಿತು.

4. ಧ್ರುವ ಶೋರೆ ಹಾಲಿ ಆವೃತ್ತಿಯಲ್ಲಿ ಸತತ 3 ಶತಕ ಸಿಡಿಸಿದ 4ನೇ ಬ್ಯಾಟರ್ ಹಾಗೂ ನಾಕೌಟ್‌ನಲ್ಲಿ ಈ ಸಾಧನೆ ಮಾಡಿದ 2ನೇ ಬ್ಯಾಟರ್. ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಭ್‌ಸಿಮ್ರಾನ್ ಸಿಂಗ್ ಹಿಂದಿನ ಸಾಧಕರು.

779: ಕರುಣ್ ನಾಯರ್ (779) ಹಾಲಿ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದರು. ಜತೆಗೆ ಗರಿಷ್ಠ ರನ್‌ಗಳಿಸಿದ ನಾಯಕ ಎನಿಸಿದರು. ಮಯಾಂಕ್ ಅಗರ್ವಾಲ್ (651 ರನ್) ನಂತರದ ಸ್ಥಾನದಲ್ಲಿದ್ದಾರೆ. 2022-23ರ ಆವೃತ್ತಿಯಲ್ಲಿ ನಾಯಕನಾಗಿ ಋತುರಾಜ್ ಗಾಯಕ್ವಾಡ್ (660) ರನ್‌ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು.

5. ಕರ್ನಾಟಕ ತಂಡ ಐದನೇ ಬಾರಿಗೆ 5ನೇ ಬಾರಿಗೆ ದೇಶೀಯ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. 2013-14, 2014-15, 2017-18 ಹಾಗೂ 2019-20ರಲ್ಲೂ ಈ ಸಾಧೆನ ಮಾಡಿತ್ತು.

5. ಕರ್ನಾಟಕ ತಂಡ ಅತಿ ಹೆಚ್ಚು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ತಮಿಳುನಾಡು (5) ತಂಡದ ದಾಖಲೆಯನ್ನು ಸರಿಗಟ್ಟಿತು.

1. ಚಾಂಪಿಯನ್ ಕರ್ನಾಟಕ ತಂಡ ಟ್ರೋಫಿಯೊಂದಿಗೆ 1 ಕೋಟಿ ನಗದು ಬಹುಮಾನ ಮೊತ್ತ ಪಡೆದರೆ, ರನ್ನರ್ ಅಪ್ ವಿದರ್ಭತಂಡ ₹50 ಲಕ್ಷ ಜೇಬಿಗಿಳಿಸಿಕೊಂಡಿತು.

ಕರ್ನಾಟಕಕ್ಕೆ
ಮುಂದಿನ ಪಂದ್ಯ
ರಣಜಿ ಟ್ರೋಫಿ
ಯಾವಾಗ: ಜ.23-26
ಎದುರಾಳಿ: ಪಂಜಾಬ್
ಎಲ್ಲಿ: ಬೆಂಗಳೂರು

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…