

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ತೆರೆದ ತೋಡಿನಲ್ಲಿ ಡ್ರೈನೇಜ್ ನೀರು ಹರಿಯುತ್ತಿರುವುದರಿಂದ ಕಿನ್ನಿಗೋಳಿಯ ಬಿತ್ತುಲು ಪ್ರದೇಶದ ಜನರಿಗೆ ಅಕ್ಷರಶಃ ರೋಗಭೀತಿ ಎದುರಾಗಿದೆ. ಕಿನ್ನಿಗೋಳಿಯ ಬಿತ್ತುಲು ಪ್ರದೇಶದ ಹಲವು ಬಾವಿಯ ನೀರು ಕಲುಷಿತಗೊಂಡಿದ್ದು, ಕುಡಿಯುವ ನೀರಿಗೆ ತತ್ವಾರ ಏರ್ಪಟ್ಟಿದೆ.
2017ರಲ್ಲಿ ಕಿನ್ನಿಗೋಳಿ ಬಿತ್ತುಲ್ ಪ್ರದೇಶದಲ್ಲಿ ಎಸ್ಟಿಪಿ ಫ್ಲಾೃಂಟ್ ನಿರ್ಮಾಣವಾಗಿದ್ದು, ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ದ್ರವ ತ್ಯಾಜ್ಯ ನೀರನ್ನು ಇದಕ್ಕೆ ಹಾಯಿಸಲಾಗಿ ಫ್ಲಾೃಂಟ್ನಿಂದ ಹೊರ ಬಂದ ನೀರನ್ನು ಸ್ಥಳೀಯ ತೋಟಗಳಿಗೆ ಬಿಡಲಾಗುತ್ತಿತ್ತು. ಪ್ರಸ್ತುತ ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ತೋಟಕ್ಕೆ ಹರಿದ ಕಾರಣ ಇಲ್ಲಿನ ಪರಿಸರ ದುರ್ವಾಸನೆಯುಕ್ತವಾಗಿದೆ. ಅಲ್ಲದೇ ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವ ಕಾರಣ ಸ್ಥಳೀಯರ ಕುಡಿಯುವ ನೀರಿನ ಬಾವಿಗೆ ಈ ನೀರು ಇಂಗಿ ಬಾವಿಯ ನೀರು ಕಲುಷಿತಗೊಂಡಿದೆ.
ಈ ಬಗ್ಗೆ ಸ್ಥಳೀಯರು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮತ್ತು ಶಾಸಕ ಉಮಾನಾಥ ಕೋಟ್ಯಾನ್ಗೆ ದೂರು ನೀಡಿದ್ದರು. ಕಿನ್ನಿಗೋಳಿ ಬಹುಮಹಡಿ ಕಟ್ಟಡಗಳಲ್ಲಿ ಎಸ್ಟಿಪಿ ಫ್ಲಾೃಂಟ್ ಇದ್ದರೂ ಕೆಲವೊಂದು ಸಲ ಶುದ್ಧೀಕರಿಸದೆ ನೇರವಾಗಿ ನೀರನ್ನು ಹೊರ ಬಿಡುತ್ತಾರೆ ಎಂಬುವುದು ಸ್ಥಳೀಯರ ಆರೋಪ.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ನೀರು ಶುದ್ಧೀಕರಣ ಘಟಕ ಕೆಟ್ಟು ಹೋಗಿದ್ದು, ಡ್ರೈನೇಜ್ ನೀರನ್ನು ನೇರವಾಗಿ ತೆರೆದ ತೋಡಿಗೆ ಬೀಡಲಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಸಮಸ್ಯೆ ಅನುಭವಿಸುವಂತಾಗಿದೆ. ಬಾವಿಯ ನೀರು ಕೂಡ ಕಲುಷಿತವಾಗಿದ್ದು, ಪರಿಸರದಲ್ಲಿ ದುರ್ವಾಸನೆಯಿಂದ ಕೂಡಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.- ಪ್ರಣಿಕ್ ಕಿನಿಗೋಳಿ, ಗ್ರಾಮಸ್ಥರು ಈ ಘಟಕ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಈ ಸಮಸ್ಯೆ ಉದ್ಭವವಾಗಿದೆ. ಬೆಳೆಯುತ್ತಿರುವ ಕಿನ್ನಿಗೋಳಿಗೆ ಈ ಘಟಕದ ಸಾಮರ್ಥ್ಯ ಸಾಕಾಗುತ್ತಿಲ್ಲ. ಅದಕ್ಕಾಗಿ ಈ ಪ್ರದೇಶದಲ್ಲಿ 80 ಸೆಂಟ್ಸ್ ಜಾಗ ಗುರುತಿಸಲಾಗಿದೆ. ಘಟಕಕ್ಕೆ ಸುಮಾರು 80 ಲಕ್ಷ ರೂ. ವೆಚ್ಚವಾಗಬಹುದು ಎಂದು ಸರ್ಕಾಕ್ಕೆ ಪತ್ರ ಬರೆಯಲಾಗಿದೆ.- ನಾಗರಾಜ್, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ