

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಹಲವು ನಟರಿದ್ದಾರೆ. ಆದರೆ, ಡಾ.ರಾಜ್ಕುಮಾರ್ ಅವರಂತಹ ವಿಭಿನ್ನ ನಟ ಮೊತ್ತೊಬ್ಬರಿಲ್ಲ. ಅವರಿಗೆ ಸಿಕ್ಕಿದ ಪಾತ್ರಗಳು ಬೇರೆ ಯಾವ ನಟನಿಗೂ ಲಭಿಸಿಲ್ಲ. ಐತಿಹಾಸಿಕ ಹಾಗೂ ಭಕ್ತಿರಸ ಪಾತ್ರಗಳಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ನಟ ಶ್ರೀನಿವಾಸಮೂರ್ತಿ ಬಣ್ಣಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಡಾ.ರಾಜ್ಕುಮಾರ್ 96ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ನಿರ್ದೇಶಕರು ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದರು. ಚಿತ್ರರಂಗದಲ್ಲಿ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದುದೇ ಅವರ ವಿಶೇಷತೆ. ಅದ್ಭುತ ನಟನೆಯ ಮೂಲಕ ಕನ್ನಡಿಗರ ಹೃದಯಾಂತರಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದು ಕೆಲ ಕಲಾವಿದರು ಸಾರ್ವಜನಿಕವಾಗಿ ಆಶ್ಲೀಲ ಮಾತುಗಳನ್ನಾಡುತ್ತಾರೆ. ಆದರೆ, ಡಾ.ರಾಜ್ಕುಮಾರ್ ಬಾಯಲ್ಲಿ ಎಂದಿಗೂ ಅಪಶಬ್ಧ ಬಂದಿಲ್ಲ. ಅವರೊಬ್ಬ ವಿಶೇಷ ವ್ಯಕ್ತಿತ್ವವುಳ್ಳ ಕಲಾವಿದ ಎಂದರು.
ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ಡಾ.ರಾಜ್ಕುಮಾರ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಛಾಯೆ ಚಿತ್ರದಿಂದ ಚಿತ್ರಕ್ಕೆ ಬದಲಾಗುತ್ತಲೇ ಹೋಯಿತು. ಎಲ್ಲೂ ಮರುಕಳಿಸದಿರುವುದು ಅವರ ವಿಶೇಷತೆ. ಕೊನೆವರೆಗೂ ನಿರ್ದೇಶಕರ ಜತೆಗೆ ವಿದ್ಯಾರ್ಥಿಯಂತೆ ಇದ್ದರು. ತಂತ್ರಜ್ಞರ ಸಲಹೆಯನ್ನು ಸ್ವೀಕರಿಸುತ್ತಿದ್ದರು ಎಂದರು.
ಕುವೆಂಪು 1924ರಲ್ಲಿ ಕಿಶೋರ ಚಂದ್ರ ಹೆಸರಿನಲ್ಲಿ ಬರೆದಿದ್ದ ಪದ್ಯವನ್ನು 2004ರಿಂದ ನಾಡಗೀತೆಯಾಗಿ ಹಾಡಲಾಗುತ್ತಿದೆ. ಪ್ರಾಯಶಃ ಕುವೆಂಪು ಇಂದಿಗೂ ಬದುಕಿದ್ದರೆ, ನಾಡಗೀತೆಯಲ್ಲಿ ಡಾ.ರಾಜ್ಕುಮಾರ್ ಹೆಸರು ಉಲ್ಲೇಖವಾಗುತ್ತಿತ್ತು. ಕನ್ನಡ ಭಾಷೆ ಹಾಗೂ ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. 100ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಬದುಕು ಬೆಳ್ಳಿತೆರೆಯಲ್ಲಿ ಬರಬೇಕು ಎಂದು ಆಶಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ.ತ್ರಿಲೋಕಚಂದ್ರ, ಆಯುಕ್ತ ವಿಕಾಸ್ ಸುರಳ್ಕರ್ ಇದ್ದರು.
ಸಮಾನತೆಯನ್ನು ಹೇಗೆ ಬಳಸಬೇಕು, ಸೋಲು-ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಂದೆ ನಮಗೆ ತಿಳಿಸಿಕೊಟ್ಟಿದ್ದಾರೆ. ಕೆಲ ಸೂಕ್ಷ್ಮತೆಗಳನ್ನು 'ಡಾ.ರಾಜ್ ವಿಶ್ವವಿದ್ಯಾಲಯ'ದಿಂದ ಮಾತ್ರ ಕಲಿಯಲು ಸಾಧ್ಯ. ಆ ಅವಕಾಶ ನಮಗೆ ಸಿಕ್ಕಿದೆ. ತಂದೆ ಪ್ರತಿ ಪಾತ್ರವನ್ನು ಸರಳೀಕರಿಸಿ ಅಭಿನಯಿಸುತ್ತಿದ್ದರು. ಸಾರ್ವಜನಿಕವಾಗಿ ಪ್ರಸಿದ್ಧಿ ಗಳಿಸಿದ್ದರೂ, ಅವರು ಮಾತ್ರ ಕೊನೆಯವರೆಗೂ 'ಮುತ್ತ್ತುರಾಜ್' ಎಂಬ ಮುಖವಾಡದಿಂದ ಹೊರಬರಲೇ ಇಲ್ಲ.-ರಾಘವೇಂದ್ರ ರಾಜ್ಕುಮಾರ್, ನಟ