More

    ಸ್ಥಳೀಯರನ್ನು ಕಡೆಗಣಿಸಿದ ಐಡಿಬಿಐ ಬ್ಯಾಂಕ್‌ಗೆ ಹೈಕೋರ್ಟ್ ತೀವ್ರ ತರಾಟೆ


    ಬೆಂಗಳೂರು : ‘ಕನ್ನಡ ನಾಡಿನ ಭೂಮಿ, ನೀರು ಪಡೆದು ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಸ್ವೀಪರ್ ಹುದ್ದೆಗಳಿಗೆ ಮಾತ್ರ ಸ್ಥಳೀಯರನ್ನು ನೇಮಿಸುವುದಲ್ಲ, ಎಲ್ಲ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು? ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆ..’

    ವಾಣಿಜ್ಯೋದ್ಯಮ ಆರಂಭಕ್ಕಾಗಿ ರಾಜ್ಯ ಸರ್ಕಾರದಿಂದ ಕೋಟ್ಯಂತರ ಬೆಲೆಬಾಳುವ ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಸಡ್ಡೆ ತೋರಿದ ಖಾಸಗಿ ಬ್ಯಾಂಕ್ ವಿರುದ್ಧ ರಾಜ್ಯ ಹೈಕೋರ್ಟ್ ಚಾಟಿ ಬೀಸಿದ ಪರಿ ಇದು.

    ಕಾಲ್ ಸೆಂಟರ್ ಸೇರಿದಂತೆ ವಿವಿಧ ಕೇಂದ್ರಗಳ ನಿರ್ಮಿಸಲು ಬೆಂಗಳೂರು ಅಂ.ರಾ. ವಿಮಾನ ನಿಲ್ದಾಣ ಸಮೀಪದ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಐಡಿಬಿಐಗೆ ನಾಲ್ಕು ಎಕರೆ ಜಮೀನು ಹಂಚಿಕೆ ಆಗಿತ್ತು. ಆದರೆ ಹಂಚಿಕೆ ಆದೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಕನ್ನಡ ವಿರೋಧಿ ನಡೆಗೆ ಆಕ್ರೋಶ ಹೊರಹಾಕಿದೆ.

    ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್ ಹಿಂದೇಟು ಹಾಕಿರುವ ಅಂಶ ಗಮನಿಸಿ ಅಸಮಾಧಾನ ಹೊರಹಾಕಿದ ನ್ಯಾಯಪೀಠ, ಕನ್ನಡಿಗರ ನೆಲ ಜಲ ಪಡೆದು ಅವರಿಗೇ ಉದ್ಯೋಗ ನೀಡದಿದ್ದರೆ ಹೇಗೆ? ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆ. ಜವಾನ ಪ್ಯೂನ್‌ನಂಥ ಉದ್ಯೋಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿತು. ಜತೆಗೆ ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಐಡಿಬಿಐಗೆ ಸೂಚನೆ ನೀಡಿದೆ.

    ಆಂಗ್ಲ ಅಧಿಕಾರಿ ನೆನಪು
    ಕಾದಂಬರಿಕಾರ ಗಳಗನಾಥರು ಹೇಳಿರುವಂತೆ ‘ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಲ್ಲೂ ಆಗಿಲ್ಲ’ ಆಂಗ್ಲ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸಿದ್ದ. ನೀವು ಅದೇ ರೀತಿಯಲ್ಲಿ ವರ್ತಿಸಬಾರದೆಂದು ನ್ಯಾಯಾಲಯ ಬ್ಯಾಂಕ್‌ಗೆ ಕಿವಿ ಹಿಂಡಿತು. ಅಂತಿಮವಾಗಿ ಪ್ರಕರಣದಲ್ಲಿ ಭೂಮಿ ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರ ರದ್ದುಪಡಿಸಿರುವ ವಿಚಾರ ಸಂಬಂಧ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

    4.5 ಎಕರೆ ಭೂಮಿ ಕೊಟ್ಟಿದ್ದ ಸರ್ಕಾರ
    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಐಎಡಿಬಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ 4.5 ಎಕರೆ ಭೂಮಿಯನ್ನು ಐಡಿಬಿಐ ಬ್ಯಾಂಕಿಗೆ 2013ರ ಫೆ.15ರಂದು ಹಂಚಿಕೆ ಮಾಡಿತ್ತು. ಬ್ಯಾಂಕಿನ ರೀಜಿನಲ್ ಪ್ರಾಸೆಸಿಂಗ್ ಯೂನಿಟ್, ಕರೆನ್ಸಿ ಚೆಸ್ಟ್ ಸೆಂಟರ್, ಕಾಲ್ ಸೆಂಟರ್, ಸಿಬ್ಬಂದಿ ವಸತಿ ನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಈ ಜಮೀನು ನೀಡಲಾಗಿತ್ತು. ಎರಡು ವರ್ಷದಲ್ಲಿ ಯೋಜನೆ ಜಾರಿಗೆ ತರಬೇಕು. ಸಿಬ್ಬಂದಿಯ ಅಧಿಕಾರಿಯ ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು ಎಂದು ಕೆಐಎಡಿಬಿ ಷರತ್ತು ವಿಧಿಸಿತ್ತು. ಆದರೆ ಹತ್ತು ವರ್ಷವಾದರೂ ಯೋಜನೆ ಜಾರಿ ಮಾಡದ ಹಿನ್ನೆಲೆಯಲ್ಲಿ ಭೂಮಿ ಹಂಚಿಕೆ ಪತ್ರ ರದ್ದುಪಡಿಸಿ 2023ರ ಜು.14ರಂದು ಕೆಐಎಡಿಬಿ ಆದೇಶಿಸಿತ್ತು.

    ಹೈಕೋರ್ಟ್‌ಗೆ ತಕರಾರು
    ಭೂಮಿ ಹಂಚಿಕೆ ಪತ್ರ ರದ್ದುಪಡಿಸಿದ ಕೆಐಎಡಿವಿ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಬ್ಯಾಂಕ್ ತಕರಾರು ಅರ್ಜಿ ಸಲ್ಲಿಸಿತ್ತು. ಅ ಅರ್ಜಿ ವಜಾಗೊಳಿಸಿ 2024ರ ಮಾ.6ರಂದು ಏಕ ಸದಸ್ಯ ಪೀಠ ಆದೇಶಿಸಿತ್ತು. ಅಲ್ಲದೆ, ಇಡೀ ಯೋಜನೆಯಲ್ಲಿ ಅಧಿಕಾರಿಯ ಹುದ್ದೆಗೆ ಕನ್ನಡಿಗರನ್ನು ನೇಮಕ ಮಾಡಬೇಕೆಂಬ ಷರತ್ತು ಉಲ್ಲಂಸಿರುವುದಕ್ಕೆ ಏಕಸದಸ್ಯ ನ್ಯಾಯಪೀಠ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬ್ಯಾಂಕ್ ಮೇಲ್ಮನವಿ ಸಲ್ಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts