ವದಂತಿಗಳಿಗೆ ಕಿವಿಗೊಡಬೇಡಿ, ಲಸಿಕೆ ಹಿಂಜರಿಕೆ ಬಿಡಿ : ಪ್ರಧಾನಿ ಮೋದಿ

narendramodi1
Published on

ನವದೆಹಲಿ : ಲಸಿಕೆ ಹಿಂಜರಿಕೆಯನ್ನು ಮೀರಿ ಆದಷ್ಟು ಬೇಗ ಕರೊನಾ ಲಸಿಕೆ ಪಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ. "ನಾನು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೀನಿ. ಇನ್ನೇನು 100 ವರ್ಷ ತುಂಬಲಿರುವ ನನ್ನ ತಾಯಿ ಕೂಡ ಲಸಿಕೆ ಪಡೆದಿದ್ದಾರೆ" ಎಂದು ತಿಳಿಸಿದ ಮೋದಿ, ಲಸಿಕೆ ಬಗೆಗಿನ ನಕಾರಾತ್ಮಕ ವದಂತಿಗಳನ್ನು ನಂಬದಂತೆ ಜನರನ್ನು ಕೋರಿದರು.

ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನ 78ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಮೋದಿ, "ನಿಮಗೆಲ್ಲಾ ಕೇಳಿಕೊಳ್ಳುತ್ತೇನೆ - ವಿಜ್ಞಾನವನ್ನು ನಂಬಿರಿ. ನಮ್ಮ ವಿಜ್ಞಾನಿಗಳನ್ನು ನಂಬಿರಿ. ಇಡೀ ದೇಶದಲ್ಲಿ 31 ಕೋಟಿಗೂ ಹೆಚ್ಚು ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೆಗೆ ಸಂಬಂಧಿಸಿದ ನಕಾರಾತ್ಮಕ ವದಂತಿಗಳನ್ನು ನಾವು ಎಂದಿಗೂ ನಂಬಬಾರದು" ಎಂದರು.

"ಲಸಿಕೆ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವವರು ಅವರ ಪಾಡಿಗೆ ಇರಲಿ ಬಿಡಿ. ನಾವೆಲ್ಲಾ ನಮ್ಮ ಸುತ್ತಲ ಜನರು ಲಸಿಕೆ ಪಡೆಯುವಂತೆ ಕೆಲಸ ಮಾಡೋಣ. ಕೋವಿಡ್​-19ನ ಅಪಾಯ ಇನ್ನೂ ಇರುವುದರಿಂದ, ಲಸಿಕಾಕರಣದ ಬಗ್ಗೆ ಹೆಚ್ಚು ಒತ್ತು ನೀಡೋಣ ಮತ್ತು ಕೋವಿಡ್​ ಪ್ರೋಟೋಕಾಲ್​ಗಳನ್ನು ಪಾಲಿಸೋಣ" ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net