ದೆಹಲಿ : ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ

manish_sisodia
Published on

ನವದೆಹಲಿ : ಕರೊನಾ ಎರಡನೇ ಅಲೆಯಲ್ಲಿ ತೀವ್ರವಾದ ಸಾವುನೋವು ಅನುಭವಿಸಿದ ದೆಹಲಿಯಲ್ಲಿ ಲಸಿಕಾ ಅಭಿಯಾನವನ್ನು ತ್ವರಿತ ಗತಿಯಲ್ಲಿ ನಡೆಸಲಾಗುತ್ತಿದೆ. ನಿನ್ನೆ ಒಂದೇ ದಿನದಲ್ಲಿ ದೆಹಲಿಯ 1,320 ಲಸಿಕಾ ಕೇಂದ್ರಗಳಲ್ಲಿ 2.05 ಲಕ್ಷಕ್ಕೂ ಹೆಚ್ಚು ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಇದು ಈವರೆಗಿನ ಎಲ್ಲ ದಾಖಲೆಗಳನ್ನೂ ಮೀರಿದ ಸಂಖ್ಯೆಯಾಗಿದೆ ಎಂದು ಡೆಪ್ಯುಟಿ ಸಿಎಂ ಮನೀಶ್​ ಸಿಸೋಡಿಯ ಹೇಳಿದ್ದಾರೆ.

"ದೆಹಲಿಯಲ್ಲಿ ಲಸಿಕಾಕರಣವು ದಾಖಲೆ ಗತಿಯಲ್ಲಿ ನಡೆಯುತ್ತಿದೆ. ಕಳೆದ ಮೂರು ದಿನಗಳಲ್ಲಿ 1.5 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಇಂದು, ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ, ಒಂದೇ ದಿನದಲ್ಲಿ 2,05,170 ಜನರಿಗೆ ಲಸಿಕೆ ನೀಡಲಾಗಿದೆ. ಈ ರೀತಿಯಾಗಿ ದೆಹಲಿಯನ್ನು ಮೂರನೇ ಅಲೆಯಿಂದ ರಕ್ಷಿಸಲಿದ್ದೇವೆ" ಎಂದು ಸಿಸೋಡಿಯ ಅವರು ಟ್ವೀಟ್ ಮಾಡಿದ್ದಾರೆ.

ಜುಲೈ ತಿಂಗಳಿಗೆ ದೆಹಲಿಗೆ 45 ಲಕ್ಷ ಡೋಸ್ ಲಸಿಕೆ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಸರ್ಕಾರ ಪತ್ರ ಬರೆದಿದೆ ಎಂದು ಆಮ್​ ಆದ್ಮಿ ಪಾರ್ಟಿಯ ಶಾಸಕಿ ಅತೀಶಿ ಹೇಳಿದ್ದಾರೆ. "ಪ್ರತಿದಿನ ದೆಹಲಿಯಲ್ಲಿ ಸುಮಾರು 1.5 ಲಕ್ಷ ಲಸಿಕೆ ಡೋಸ್​ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಜುಲೈನಲ್ಲಿ ಕನಿಷ್ಠ 45 ಲಕ್ಷ ಡೋಸ್​ಗಳನ್ನು ದೆಹಲಿಗೆ ನೀಡಿದರೆ ನಗರದ ಜನರಿಗೆ ಆದಷ್ಟು ಬೇಗ ಲಸಿಕೆ ನೀಡಿ ಮೂರನೇ ಅಲೆಯಿಂದ ರಕ್ಷಿಸಬಹುದು" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net