ಆರೋಪಿ ಸುಶೀಲ್​ಕುಮಾರ್​ ಜೊತೆ ಪೊಲೀಸರ ಸೆಲ್ಫಿ ಸೆಷನ್!

shushil
Published on

ನವದೆಹಲಿ : ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್​ ಅವರನ್ನು ನಿನ್ನೆ ಬೆಳಿಗ್ಗೆ ದೆಹಲಿಯ ಮಾಂಡೋಲಿ ಜೈಲಿನಿಂದ ತಿಹಾರ್​ ಜೈಲಿಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕರ್ತವ್ಯನಿರತ ಪೊಲೀಸ್​ ಸಿಬ್ಬಂದಿಗಳು ಕುಮಾರ್​ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಪ್ರಸಂಗ ನಡೆದಿದೆ.

ಸ್ಪೆಷಲ್​ ಸೆಲ್​ ಪೊಲೀಸರು ಮತ್ತು ದೆಹಲಿ ಆರ್ಮಡ್​ ಪೊಲೀಸ್​ನ ಥರ್ಡ್​ ಬಟಾಲಿಯನ್ ಸಿಬ್ಬಂದಿಯನ್ನು ಸ್ಥಳಾಂತರದ ಸಮಯದಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಹೈ ರಿಸ್ಕ್​ ಖೈದಿಗಳೊಂದಿಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಕಳುಹಿಸುವ ಸಲುವಾಗಿ ಕೆಲವು ಸಿಬ್ಬಂದಿ ಫೋಟೋಗಳನ್ನು ತೆಗೆದುಕೊಂಡರು. ನಂತರ ಈ ಸಿಬ್ಬಂದಿಗಳು ಆ ಫೋಟೋಗಳನ್ನು ತಮ್ಮ ವಾಟ್ಸಾಪ್​ ಗ್ರೂಪ್​ಗಳಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಲು ಆರಂಭಿಸಿದ್ದು, ಫೋಟೋಗಳು ವೈರಲ್​ ಆದವು ಎನ್ನಲಾಗಿದೆ.

ಹೀಗೆ ಆರೋಪಿ ಸುಶೀಲ್​ ಕುಮಾರ್​ರೊಂದಿಗೆ ಹಲವು ಪೊಲೀಸರು ಸೆಲ್ಫಿ ಮತ್ತು ಫೋಟೋ ಸೆಷನ್​ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿದ್ದು, ಇದೀಗ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆದೇಶಿಸಿದ್ದಾರೆ ಎನ್ನಲಾಗಿದೆ.

ಮತ್ತೊಬ್ಬ ಕುಸ್ತಿಪಟು ಸಾಗರ್​ ಧನಕರ್​ ಕೊಲೆ ಆರೋಪದ ಮೇಲೆ ಸುಶೀಲ್ ಕುಮಾರ್​ರನ್ನು ಬಂಧಿಸಿದ್ದು, ಜುಲೈ 9 ರವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿಲು ದೆಹಲಿ ಕೋರ್ಟ್ ಆದೇಶಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net