

Chinese aquarium: ಚೀನಾದ ಅಕ್ವೇರಿಯಂನಲ್ಲಿ ದೈತ್ಯ ಗಾತ್ರದ ಶಾರ್ಕ್ ನೋಡಿ ಒಂದು ಕ್ಷಣ ಪ್ರವಾಸಿಗರು ಬೆಚ್ಚಿಬಿದ್ದ ಘಟನೆ ನಡೆದಿದೆ. ಅಕ್ವೇರಿಯಂನಲ್ಲಿ ಯಾರಾದರೂ ಶಾರ್ಕ್ ಬಿಡುತ್ತಾರಾ ಎಂದು ನೀವು ಯೋಚಿಸುತ್ತಿರಬಹುದು. ಯೋಚಿಸಬೇಡಿ ಅಲ್ಲಿ ಇದ್ದಿದ್ದು ನಿಜವಾದ ಶಾರ್ಕ್ ಅಲ್ಲ, ಬದಲಾಗಿ ರೋಬೋಟ್ ಶಾರ್ಕ್. ಇದನ್ನು ತಿಳಿದು ಪ್ರವಾಸಿಗರು ನಿಟ್ಟುಸಿರು ಬಿಟ್ಟರು.
ಈ ಘಟನೆ ಚೀನಾದ ಶೆನ್‌ಜೆನ್‌ನಲ್ಲಿರುವ ಕ್ಸಿಯೋಮಿಶಾ ಸೀ ವರ್ಲ್ಡ್ ಅಕ್ವೇರಿಯಂನಲ್ಲಿ ನಡೆದಿದೆ. ಐದು ವರ್ಷಗಳ ಜೀರ್ಣೋದ್ಧಾರ ಕಾರ್ಯದ ನಂತರ, ಈ ಸ್ಥಳವನ್ನು ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಮತ್ತೆ ತೆರೆಯಲಾಯಿತು. ಸದ್ಯಕ್ಕೆ ಒಂದು ವಾರದವರೆಗೆ ಪ್ರಾಯೋಗಿಕವಾಗಿ ಅಕ್ವೇರಿಯಂ ಕಾರ್ಯನಿರ್ವಹಿಸಿತು. ಈ ಅವಧಿಯಲ್ಲಿ ಸುಮಾರು 1,00,000 ಪ್ರವಾಸಿಗರು 6,45,000 ಚದರ ಅಡಿಯ ಅಕ್ವೇರಿಯಂಗೆ ಭೇಟಿ ನೀಡಿದರು. ಪ್ರತಿ ವ್ಯಕ್ತಿಗೆ 40 ಡಾಲರ್ ಪ್ರವೇಶ ಶುಲ್ಕವನ್ನು ಸಹ ವಿಧಿಸಲಾಯಿತು. ಈ ಅಕ್ವೇರಿಯಂನ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ವಿಶ್ವದ ಅತಿದೊಡ್ಡ ಮೀನು ತಿಮಿಂಗಿಲ ಶಾರ್ಕ್.
ಅಂದಹಾಗೆ ತಿಮಿಂಗಿಲ ಶಾರ್ಕ್ಗಳು 60 ಅಡಿ ಉದ್ದದವರೆಗೆ ಬೆಳೆಯುತ್ತವೆ. ಕೆಲ ಪ್ರವಾಸಿಗರು ತಿಮಿಂಗಿಲ ಶಾರ್ಕ್ ಒರಿಜಿನಲ್ ಅಲ್ಲ, ರೋಬೋಟ್ ಎಂದು ತಕ್ಷಣ ಅರಿತುಕೊಂಡರು. ಈ ಮೂಲಕ ಜನರನ್ನು ವಂಚಿಸುತ್ತಿರುವ ಅಕ್ವೇರಿಯಂ ವಿರುದ್ಧ ವ್ಯಾಪಕ ಪ್ರತಿಭಟನೆಯು ಸಹ ವ್ಯಕ್ತವಾಯಿತು. ಟಿಕೆಟ್‌ನ ಹಣ ವಾಪಸ್ ನೀಡುವಂತೆ ಹಲವರು ಒತ್ತಾಯಿಸಿದರು.
ಇದೇ ಸಮಯದಲ್ಲಿ, ವಿವಾದಕ್ಕೆ ತೆರೆ ಎಳೆಯಲು ಅಕ್ವೇರಿಯಂ ಅಧಿಕಾರಿಗಳು ವಿವರಣೆ ನೀಡಿದರು. ತಿಮಿಂಗಿಲ ಶಾರ್ಕ್‌ಗಳ ವ್ಯಾಪಾರವನ್ನು ನಿಷೇಧಿಸುವ ಕಾನೂನುಗಳನ್ನು ಅನುಸರಿಸುವ ಕಾರಣಕ್ಕೆ ಸಾವಿರಾರು ಚೈನೀಸ್ ಯುವಾನ್ ವೆಚ್ಚದಲ್ಲಿ ರೋಬೋ-ಶಾರ್ಕ್ ಅನ್ನು ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದು ರೋಬೋಟ್‌ನ ಉದ್ದೇಶವಾಗಿದ್ದು, ಯಾರಿಗೂ ಮೋಸ ಮಾಡುವ ಉದ್ದೇಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚೀನಾದ ಪ್ರವಾಸಿ ಕೇಂದ್ರಗಳು ಪ್ರವಾಸಿಗರನ್ನು ಮೋಸಗೊಳಿಸಲು ಟೆಕ್ನಾಲಜಿ ಬಳಸುತ್ತಿರುವುದು ಇದೇ ಮೊದಲಲ್ಲ. ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಮೃಗಾಲಯವೊಂದು ಇತ್ತೀಚೆಗೆ ಕಪ್ಪು ಬಣ್ಣದ ಚೋ ಚೋ ನಾಯಿಗಳನ್ನು ಪಾಂಡಾಗಳಂತೆ ಪ್ರದರ್ಶಿಸಿದ್ದಕ್ಕಾಗಿ ಪ್ರತಿಭಟನೆಗಳನ್ನು ಎದುರಿಸಿತು. ಮೇ ತಿಂಗಳಲ್ಲಿ ಜಿಯಾನ್‌ಶು ಪ್ರಾಂತ್ಯದಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿದೆ. (ಏಜೆನ್ಸೀಸ್)