ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ...ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels
Published on

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ ಹಣ್ಣಿನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳು ಸಹ ಇವೆ. ಬೇಸಿಗೆ ಕಾಲ ಬಂತೆಂದರೆ ಸಾಕು ಮಾವಿನ ಹಣ್ಣಿಗೆ ಸಖತ್​ ಡಿಮ್ಯಾಂಡ್​ ಬರುತ್ತದೆ. ಏಕೆಂದರೆ, ಬೇಸಿಗೆ ಕಾಲದಲ್ಲಿ ಮಾತ್ರ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಸೀಸನಲ್​ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಮಾವಿನ ಹಣ್ಣಿಗೆ ತುಂಬಾ ಬೇಡಿಕೆ ಇದೆ.

ಸಾಮಾನ್ಯವಾಗಿ ನಾವು ಮಾವಿನ ಹಣ್ಣನ್ನು ತಿಂದು, ಕೊನೆಯಲ್ಲಿ ವಾಟೆಯನ್ನು ಬಿಸಾಡುತ್ತೇವೆ. ಆದರೆ, ಅದೇ ವಾಟೆಯಿಂದ ಅನೇಕ ಉಪಯೋಗಗಳಿವೆ ಎಂಬುದು ನಿಮಗೆ ಗೊತ್ತಾ? ಅದರ ಬಗ್ಗೆ ತಿಳಿದರೆ, ನೀವು ಎಂದಿಗೂ ವಾಟೆಯನ್ನು ಬಿಸಾಡುವುದೇ ಇಲ್ಲ. ಮಾವಿನ ಹಣ್ಣಿನಲ್ಲಿರುವ ಹಲವು ಪೋಷಕಾಂಶಗಳು ವಾಟೆಯಲ್ಲಿಯೂ ಇವೆ. ಕೊಲೆಸ್ಟ್ರಾಲ್ ಮತ್ತು ಅತಿಸಾರದಂತಹ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ವಾಟೆಗಳು ಹೊಂದಿವೆ. ಅಷ್ಟಕ್ಕೂ ಮಾವಿನ ವಾಟೆಯು ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನಾವೀಗ ವಿವರವಾಗಿ ತಿಳಿಯೋಣ.

ರಕ್ತ ಪರಿಚಲನೆ ಸುಧಾರಣೆ

ಮಾವಿನ ವಾಟೆಯ ಪುಡಿಯನ್ನು ಮೊಸರು ಮತ್ತು ಉಪ್ಪಿನೊಂದಿಗೆ ಬೆರೆಸಿ ತಿನ್ನುವುದರಿಂದ ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ ಕಡಿಮೆಯಾಗುತ್ತದೆ. ಅಧಿಕ ರಕ್ತಸ್ರಾವದಿಂದ ಬಳಲುತ್ತಿರುವವರು ಇದನ್ನು ತಿನ್ನುವುದರಿಂದ ಉತ್ತಮ ಪರಿಹಾರವನ್ನು ಪಡೆಯಬಹುದು. ಅಷ್ಟೇ ಅಲ್ಲ, ಮಾವಿನ ಬೀಜಗಳು ರಕ್ತ ಪರಿಚಲನೆ ಸುಧಾರಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ನೇರ ಪರಿಣಾಮ ಬೀರುತ್ತದೆ.

ಅತಿಸಾರ ಶಮನ

ಮಾವಿನ ವಾಟೆ ಮತ್ತು ವೀಳ್ಯದೆಲೆಯನ್ನು ಸಮಾನ ಪ್ರಮಾಣದಲ್ಲಿ ಪುಡಿಮಾಡಿ ದಿನಕ್ಕೆ ಮೂರು ಬಾರಿ ಎರಡು ಚಮಚ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ. ಅತಿಸಾರದಲ್ಲಿ ರಕ್ತವಿದ್ದರೆ, ಮಾವಿನ ಬೀಜಗಳನ್ನು ಪುಡಿಮಾಡಿ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬಹುದು.

ಹಲ್ಲಿನ ಆರೋಗ್ಯ

ಹಸಿರು ಮಾವಿನ ಎಲೆಗಳನ್ನು ಒಣಗಿಸಿ, ಪುಡಿಮಾಡಿದ ಮಾವಿನ ವಾಟೆಗಳನ್ನು ಸೇರಿಸಿ ಎರಡನ್ನೂ ಮಿಶ್ರಣ ಮಾಡಿ ಶೋಧಿಸಿ. ಇದರಿಂದ ನೀವು ಪ್ರತಿದಿನ ಹಲ್ಲುಜ್ಜಿದಾಗ ಹಲ್ಲುಗಳು ಬಿಳಿ ಮತ್ತು ಬಲವಾಗಿರುತ್ತವೆ. ಹಲ್ಲುನೋವಿನಿಂದ ಬಳಲುತ್ತಿರುವವರಿಗೂ ಇದು ಉತ್ತಮ ಪರಿಹಾರವಾಗಿದೆ. ಮಾವಿನ ಎಲೆಗಳನ್ನು ಸ್ವಲ್ಪ ಸಮಯ ಅಗಿಯುತ್ತಾ ಪ್ರತಿದಿನ ಉಗುಳುವುದರಿಂದ ಹಲ್ಲು ಅಲುಗಾಡುವುದು ನಿಲ್ಲುತ್ತದೆ ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುವ ಸಮಸ್ಯೆಯೂ ಪರಿಹಾರವಾಗುತ್ತದೆ.

ಕ್ಯಾನ್ಸರ್‌ ಅಪಾಯ ತಗ್ಗಿಸುತ್ತದೆ

ಮಾವಿನ ವಾಟೆಯಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ, ಫೋಲೇಟ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಅದರಲ್ಲಿ ಮ್ಯಾಂಜಿಫೆರಿನ್ ಕೂಡ ಇದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಮಾವಿನ ವಾಟೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ಜೀವಕೋಶಗಳನ್ನು ಕ್ಯಾನ್ಸರ್‌ನಂತಹ ಅಪಾಯಗಳಿಂದ ರಕ್ಷಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದಿಷ್ಟೇ ಅಲ್ಲದೆ, ಹೃದಯದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಮಾವಿನ ವಾಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಮತ್ತೊಂದೆಡೆ, ಮುಖದ ಮೇಲಿನ ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಟೆಯ ಪುಡಿಯಲ್ಲಿ ಟೊಮ್ಯಾಟೋ ರಸವನ್ನು ಬೆರೆಸಿ ಸ್ಕ್ರಬ್ ಮಾಡುವುದರಿಂದ ತ್ವಚೆಯ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಕಾಂತಿಯುತವಾಗಿ ಕಾಣುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net