

ನವದೆಹಲಿ: ಟೀಮ್ ಇಂಡಿಯಾದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದ್ದು, ಇದರಲ್ಲಿ ಹೆಚ್ಚಿನ ಅಚ್ಚರಿಗಳು ಇರುವುದಿಲ್ಲ ಎನ್ನಲಾಗಿದೆ. ಸ್ಫೋಟಕ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗಿ ಹರ್ಷಿತ್ ರಾಣಾ ಗುತ್ತಿಗೆ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದ್ದಾರೆ. ಇವರು ತಲಾ 1 ಕೋಟಿ ರೂ. ವಾರ್ಷಿಕ ವೇತನದ ಸಿ ಶ್ರೇಣಿಗೆ ಸೇರಲಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ಮಾನದಂಡದ ಅನ್ವಯ ವಾರ್ಷಿಕ ಗುತ್ತಿಗೆ ಪಡೆಯಲು ನಿಶ್ಚಿತ ಅವಧಿಯಲ್ಲಿ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಟಿ20 ಪಂದ್ಯ ಆಡಿರಬೇಕು. ಹರ್ಷಿತ್ ಇದುವರೆಗೆ 2 ಟೆಸ್ಟ್, 5 ಏಕದಿನ, 1 ಟಿ20 ಪಂದ್ಯ ಆಡಿದ್ದು, ಈ ಮೂರೂ ಮಾನದಂಡ ತಲುಪಿಲ್ಲ. ಆದರೂ ಅವರಿಗೆ ವಿಶೇಷ ವಿನಾಯಿತಿ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.
17 ಟಿ20 ಪಂದ್ಯ ಆಡಿರುವ ಅಭಿಷೇಕ್ ಮತ್ತು 5 ಟೆಸ್ಟ್ ಆಡಿರುವ ನಿತೀಶ್ ರೆಡ್ಡಿ ಈ ಮಾನದಂಡದಡಿಯಲ್ಲೇ ಬರುತ್ತಾರೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಶ್ರೇಯಸ್ ಅಯ್ಯರ್ ಕೂಡ ಗುತ್ತಿಗೆಗೆ ಮರುಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.