

Ilaiyaraja : ತಮಿಳುನಾಡಿನ ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಲ್ಲಿರುವ ಆಂಡಾಳ ದೇವಸ್ಥಾನದಲ್ಲಿ ತನಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಇಳಯರಾಜ ಸ್ಪಷ್ಟನೆ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಗರ್ಭಗುಡಿ ಪ್ರವೇಶಿಸಿದ ಇಳಯರಾಜ ಅವರನ್ನು ಅರ್ಚಕರು ಹೊರಹಾಕಿದರು ಎಂದು ಎಲ್ಲೆಡೆ ಪ್ರಚಾರವಾಗಿತ್ತು ಮತ್ತು ಭಾರಿ ಆಕ್ರೋಶವೂ ವ್ಯಕ್ತವಾಗಿತ್ತು.
ಇದೇ ವಿಚಾರವಾಗಿ ದೇವಸ್ಥಾನದ ಆಡಳಿತಾಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದಾರೆ. ಅರ್ಚಕರಿಗೆ ಮಾತ್ರ ಪ್ರವೇಶವಿರುವ ದೇಗುಲದ ಮುಂಭಾಗದ ಮಂಟಪಕ್ಕೆ ಇಳಯರಾಜ ಅವರು ಗೊತ್ತಿಲ್ಲದೇ ಪ್ರವೇಶಿಸಿದರು. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿದೆವು. ಪ್ರಮುಖ ವ್ಯಕ್ತಿಗಳು ಸಾಮಾನ್ಯವಾಗಿ ವಸಂತಮಂಟಪಕ್ಕೆ ಭೇಟಿ ನೀಡುತ್ತಾರೆ. ಇಳಯರಾಜ ಅವರಿಗೆ ಪೂರ್ಣಕುಂಭ ಅರ್ಪಿಸಿ, ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಗಿದೆ. ಆದರೆ, ದೇವಸ್ಥಾನದ ಅರ್ಚಕರ ವಿರುದ್ಧ ಕೇಳಿಬಂದಿರುವ ಆರೋಪಗಳು ಸುಳ್ಳು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಇಳಯರಾಜ ಅವರು ಮಾರ್ಗಶಿರ ಮಾಸದ ಮೊದಲ ದಿನದ ಮುಂಜಾನೆ ಆಂಡಾಳ ಮಾತಾ ದೇವಸ್ಥಾನಕ್ಕೆ ತೆರಳಿದರು. ತಮ್ಮ ದಿವ್ಯ ಪಾಶುರಂ ಎಂಬ ಭಕ್ತಿಗೀತೆಗಳ ಬಿಡುಗಡೆ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಗರ್ಭಗುಡಿ ಪ್ರವೇಶ ಮಾಡಿದ್ದಕ್ಕೆ ಅರ್ಚಕರು ಹೊರಗೆ ಕಳುಹಿಸಿದರು ಎಂದು ಸುದ್ದಿ ಹರಿದಾಡುತ್ತಿದ್ದಂತೆ ಅನೇಕರು ಅರ್ಚಕರ ವಿರುದ್ಧ ಕಿಡಿಕಾರಿದರು. ಜಾತಿ ತಾರತಮ್ಯದ ಮೂಲಕ ಇಳಯರಾಜ ಅವರನ್ನು ಅವಮಾನಿಸಲಾಗುತ್ತಿದೆ ಎಂಬ ಆಕ್ರೋಶಗಳು ವ್ಯಕ್ತವಾಯಿತು.
ಆದರೆ, ಇನ್ನೊಂದು ವರ್ಗದ ಜನರು ದೇವಾಲಯದ ಹೊರಗೆ ಇಳಯರಾಜರನ್ನು ಅರ್ಚಕರು ಸನ್ಮಾನಿಸಿದ್ದಾರೆ ಎಂದು ವಾದಿಸಿತು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಇಳಯರಾಜ ಕೂಡ ಪ್ರತಿಕ್ರಿಯಿಸಿದ್ದು, ನನಗೆ ಅವಮಾನ ಆಗಿದೆ ಅನ್ನೋದು ಸುಳ್ಳು, ಪೂರ್ಣಕುಂಭ ಸ್ವಾಗತ ಸಿಕ್ಕಿದೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಇಳಯರಾಜ ಜೀವನಾಧಾರಿತ ಧನುಷ್ ನಟನೆಯ ಚಿತ್ರವು ಸ್ಥಗಿತಗೊಂಡಿದೆ ಎಂಬ ಸುದ್ದಿ ಬಂದಿದೆ. ಇಳಯರಾಜ ಮತ್ತು ನಿರ್ದೇಶಕ ಅರುಣ್ ಮಾಥೇಶ್ವರನ್ ನಡುವಿನ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಈ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಚಿತ್ರಕ್ಕೆ ಬೃಹತ್ ಬಜೆಟ್ ಕೂಡ ಅಡ್ಡಿಯಾಗಿದೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್, ಧನುಷ್ ಮತ್ತು ಇಳಯರಾಜ ಬಿಡುಗಡೆ ಮಾಡಿದ್ದರು. ಆದರೆ, ಈಗ ಸಿನಿಮಾ ನಿಂತಿದೆ ಎಂಬ ಸುದ್ದಿ ಹರಿದಾಡುತ್ತಿದೆ. (ಏಜೆನ್ಸೀಸ್)