

| ಚೇತನ್ ನಾಡಿಗೇರ್ ಬೆಂಗಳೂರು
ಡೊಳ್ಳನ್ನು ಭಕ್ತಿಗಾಗಿ ನುಡಿಸಬೇಕು ಎನ್ನುತ್ತಾರೆ ಅಪ್ಪ. ಬರೀ ಭಕ್ತಿ ಎಂದರೆ ಹೊಟ್ಟೆ ತುಂಬುವುದಿಲ್ಲ ಎನ್ನುತ್ತಾನೆ ಮಗ. ಆ ಕಲೆ ಹೊಟ್ಟೆತುಂಬಿಸುವುದಕ್ಕಲ್ಲ ಎಂದು ಅಪ್ಪ ಹೇಳಿದರೆ, ಆ ಕಲೆಯಿಂದ ಜೀವನ ಕಟ್ಟಿಕೊಳ್ಳುವುದು ಸಹ ಮುಖ್ಯ ಎಂದು ಮಗ ವಾದಿಸುತ್ತಾನೆ. ಜಾತ್ರೆಯಲ್ಲದೆ ಬೇರೆ ಸಮಾರಂಭಗಳಲ್ಲಿ ಡೊಳ್ಳು ನುಡಿಸಬಾರದು ಎನ್ನುತ್ತಾರೆ ಅಪ್ಪ. ಶಾಸಕನ ಮಗಳ ಮದುವೆಗೂ ತಂಡವನ್ನು ಕಟ್ಟಿಕೊಂಡು ಹೋಗಿ ಡೊಳ್ಳು ನುಡಿಸಿ ಬರುತ್ತಾನೆ ಮಗ. ಗಂಡಸರು ಮಾತ್ರ ನುಡಿಸಬೇಕು ಎನ್ನುತ್ತಾರೆ ಅಪ್ಪ. ಹೆಂಗಸರು ಯಾಕೆ ನುಡಿಸಬಾರದು ಎಂಬ ಪ್ರಶ್ನೆ ಮಗನದು ...
‘ಡೊಳ್ಳು’ ಚಿತ್ರವು ಭದ್ರ ಎಂಬ ಡೊಳ್ಳುವಾದಕನ ಸುತ್ತ ಸುತ್ತುತ್ತದೆ. ಡೊಳ್ಳು ಬಾರಿಸುವ ಕಲೆಯನ್ನು ಮಗ ಮುಂದುವರಿಸಲಿ, ಅದರ ಮೂಲಕ ಶಿವನನ್ನು ಆರಾಧಿಸಲಿ, ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಸಂಪ್ರದಾಯವನ್ನು ಮುಂದುವರಿಸಲಿ ಎಂಬುದು ಅವನಪ್ಪನ ಆಸೆ. ಆದರೆ, ಡೊಳ್ಳು ಬಾರಿಸಿದರೆ ಹೊಟ್ಟಪಾಡು ನಡೆಯುವುದಿಲ್ಲ ಎಂಬುದು ಅವನ ಸ್ನೇಹಿತರ ವರಸೆ. ಹಳ್ಳಿಯಲ್ಲಿ ಕೂತರೆ ಜೀವನ ನಿಂತನೀರಾಗುತ್ತದೆ ಎಂಬ ಬೇಸರದಿಂದ ಅವರೆಲ್ಲರೂ ಪಟ್ಟಣ ಸೇರುತ್ತಾರೆ. ಇತ್ತ ಹಳ್ಳಿ ಬಿಡುವುದಕ್ಕೆ ಇಷ್ಟವಿಲ್ಲದ ಭದ್ರ ಒಬ್ಬಂಟಿಯಾಗುತ್ತಾನೆ. ಜಾತ್ರೆಯ ಸಂದರ್ಭದಲ್ಲಾದರೂ ಸ್ನೇಹಿತರನ್ನು ಸೇರಿಸಿ ಮತ್ತೆ ಡೊಳ್ಳು ನುಡಿಸಬಹುದು ಎಂಬ ಅವನ ಆಸೆ ಈಡೇರುವುದಿಲ್ಲ. ಹಾಗಾದರೆ, ಜಾತ್ರೆಯಲ್ಲಿ ಡೊಳ್ಳು ನುಡಿಸುವ ಸಂಪ್ರದಾಯ ನಿಂತು ಹೋಗುತ್ತದಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಚಿತ್ರ ನೋಡಬೇಕು. ‘ಡೊಳ್ಳು’ ಚಿತ್ರವು ಅಪ್ಪ-ಮಗನ ನಡುವಿನ ಸಂಘರ್ಷದ ಕಥೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಇಲ್ಲಿ ‘ಡೊಳ್ಳು’ ಎಂಬ ಜಾನಪದ ಕಲೆಯ ಇವತ್ತಿನ ಚಿತ್ರಣ ಇದೆ. ಆ ಕಲೆ ಕ್ರಮೇಣ ವ್ಯಾಪಾರೀಕರಣವಾಗುತ್ತಿರುವುದಕ್ಕೆ ಬೇಸರವಿದೆ. ಯುವಕರು ಹಳ್ಳಿ ಬಿಟ್ಟು, ಪಟ್ಟಣ ಸೇರುತ್ತಿರುವ ಕಥೆ ಇದೆ. ಜಾನಪದ ಕಲೆಗಳು ತೆರೆಮರೆಗೆ ಸರಿದು, ಆ ಕಲೆಗಳನ್ನು ಆಧುನೀಕರಣ ನುಂಗುತ್ತಿರುವ ವ್ಯಥೆ ಇದೆ. ಹಳೆಯದನ್ನು ಬಿಡಲಾರದ, ಹೊಸದಕ್ಕೆ ಹೊಂದಿಕೊಳ್ಳಲಾರದ ಹತಾಶೆ ಇದೆ. ಡೊಳ್ಳು ಬಾರಿಸುವ ಕಲೆ ಕೇವಲ ಗಂಡಸರಿಗೆ ಸೀಮಿತವಾಗಬಾರದು ಎಂಬ ಕಳಕಳಿ ಇದೆ. ಹೊಟ್ಟೆಪಾಡು ಎಷ್ಟು ಮುಖ್ಯವೋ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಸಹ ಅಷ್ಟೇ ಮುಖ್ಯ ಎಂಬ ಪ್ರೀತಿ ಇದೆ. ಅದೇ ಕಾರಣಕ್ಕೆ ಚಿತ್ರ ವಿಭಿನ್ನವೆನಿಸುತ್ತದೆ.
ಚಿತ್ರವು ತನ್ನ ಕಥಾವಸ್ತುವಿನಿಂದ ಹೇಗೆ ವಿಭಿನ್ನವಾಗಿ ಎದ್ದು ನಿಲ್ಲುತ್ತದೋ, ಅಭಿನಯ ಮತ್ತು ಇಡೀ ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿಯಿಂದಲೂ ವಿಭಿನ್ನವೆನಿಸುತ್ತದೆ. ಪ್ರಮುಖವಾಗಿ, ಶಿವಮೊಗ್ಗ, ಸಾಗರದ ಸುಂದರವಾದ ಪ್ರದೇಶದಲ್ಲಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಾಗರ್. ಅವರು ಕಥೆಯ ಚೌಕಟ್ಟು ಬಿಟ್ಟು ಹೋಗುವುದಿಲ್ಲ. ಹೇಳಬೇಕಾಗಿದ್ದನ್ನು ಕಡಿಮೆ ಅವಧಿಯಲ್ಲಿ ಹೇಳಿ ಮುಗಿಸುತ್ತಾರೆ. ಆದರೂ ಚಿತ್ರ ಅಲ್ಲಲ್ಲಿ ನಿಧಾನವಾಗುತ್ತದೆ ಮತ್ತು ಕೆಲವೊಮ್ಮೆ ಅದೇ ವಿಷಯ ಪುನರಾವರ್ತನೆಯಾಗುತ್ತಿದೆ ಎಂದನಿಸಬಹುದು. ಇದು ಬಿಟ್ಟರೆ ಚಿತ್ರದಲ್ಲಿ ಹೆಚ್ಚು ತಪು್ಪಗಳನ್ನು ಹುಡುಕುವುದು ಕಷ್ಟ.
ತಾರಾಗಣದ ವಿಷಯದಲ್ಲೂ ಅಷ್ಟೇ. ಬಾಬು ಹಿರಣ್ಣಯ್ಯ ಮತ್ತು ಚಂದ್ರಮಯೂರ್ ಬಿಟ್ಟರೆ ಮಿಕ್ಕಂತೆ ಎಲ್ಲರೂ ಹೊಸಬರೇ. ಆದರೆ, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಶರಣ್ಯ ಸುರೇಶ್ ಹೊಸಬರು ಎಂದನಿಸದಷ್ಟು ಚೆನ್ನಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ.