ಪೊಲೀಸರೂ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು: ಸಾರಿಗೆ ಇಲಾಖೆಯಿಂದ ಕಟ್ಟಾಜ್ಞೆ

Police
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಮಾಡದಿದ್ದರೆ ಪೊಲೀಸರು ತಡೆದು ಕಾನೂನುಕ್ರಮ ಜರುಗಿಸುವುದು ಸರ್ವೇಸಾಮಾನ್ಯ. ಆದರೆ ಕೆಲವೊಮ್ಮೆ ಪೊಲೀಸರೇ ಈ ನಿಯಮಗಳನ್ನು ಉಲ್ಲಂಘಿಸುವುದು ಕೂಡ ಕಂಡುಬರುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿ, ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ಪೊಲೀಸ್ ಇಲಾಖೆಯ ವಾಹನ ಚಾಲಕರು ಮತ್ತು ಅಧಿಕಾರಿ-ಸಿಬ್ಬಂದಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸಾರಿಗೆ ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ.

ಪೊಲೀಸ್ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ವಾಹನಗಳು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುವುದನ್ನು ಸಾರ್ವಜನಿಕರು ಮೊಬೈಲ್‌ ಫೋನ್​ನಲ್ಲಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುತ್ತಿದ್ದಾರೆ. ಇದರಿಂದ ಇಲಾಖೆಗೆ ಮುಜುಗರ ಉಂಟಾಗುತ್ತಿದೆ. ಇದಲ್ಲದೆ, ಇ-ಮೇಲ್, ಪಬ್ಲಿಕ್ ಐ ಆ್ಯಪ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಸಮೇತ ದೂರು ನೀಡುತ್ತಿದ್ದಾರೆ.

ಸರ್ಕಾರದ ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮ ಪಾಲಿಸಬೇಕು. ಸೀಟ್ ಬೆಲ್ಟ್ ಧರಿಸುವುದು, ಇಲಾಖಾ ಬೈಕ್‌ಗಳಲ್ಲಿ ಸಾಗುವಾಗ ಸವಾರ/ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿರುವುದು, ಒನ್‌ವೇನಲ್ಲಿ ಚಾಲನೆ ಮಾಡದೆ ಇರುವುದು, ಮೊಬೈಲ್ ಫೋನ್​ ಬಳಸದಿರುವುದು, ದೋಷಪೂರಿತ ನಂಬರ್ ಪ್ಲೇಟ್ ಹೊಂದಿರದಿರುವುದು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡದಿರುವುದು ಮುಂತಾದ ನಿಯಮಗಳನ್ನು ಪಾಲಿಸಲೇಬೇಕು.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಮೋಟಾರು ವಾಹನ ಕಾಯ್ದೆ ಅನ್ವಯ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ತಮ್ಮ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net