ವಿಜಯ್ ಮನೆಯಲ್ಲಿ ರಶ್ಮಿಕಾ ಪಟಾಕಿ? ಕುತೂಹಲ ಮೂಡಿಸಿದ ಟಾಲಿವುಡ್ ಜೋಡಿಯ ಫೋಟೋಗಳು

Rashmika Vijay (2)
Published on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರಾ? ಈ ಪ್ರಶ್ನೆ ಆಗಾಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುತ್ತದೆ. ಅದಕ್ಕೆ ಪೂರಕವಾಗಿ ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. 2023ರ ಹೊಸ ವರ್ಷವನ್ನು ರಶ್ಮಿಕಾ, ವಿಜಯ್ ಜತೆ ಆಚರಿಸಿದ್ದರು. ಒಟ್ಟಿಗಿರುವ ಫೋಟೋ ಇರದಿದ್ದರೂ, ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಫೋಟೋಗಳನ್ನು ನೋಡಿ ಅಭಿಮಾನಿಗಳೇ ಹಾಗೆಂದು ತೀರ್ಮಾನಿಸಿದ್ದರು.

ಅದೇ ರೀತಿ ಇದೀಗ ದೀಪಾವಳಿ ಹಬ್ಬವನ್ನೂ ಈ ಜೋಡಿ ಒಟ್ಟಿಗೆ ಆಚರಿಸಿದ್ದಾರೆ. ವಿಜಯ್ ಮನೆಯಲ್ಲಿ ರಶ್ಮಿಕಾ ದೀಪ ಹಚ್ಚಿ, ಪಟಾಕಿಸಿ ಸಂಭ್ರಮಿಸಿದ್ದಾರೆ. ಆದರೆ, ಇಬ್ಬರೂ ಜತೆಗಿರುವ ಫೋಟೋಗಳಿಲ್ಲ. ಬದಲಾಗಿ ರಶ್ಮಿಕಾ ತಾವೊಬ್ಬರೇ ಮರದ ಚೇರಿನ ಮೇಲೆ ಕುಳಿತ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ವಿಜಯ್, ತಂದೆ-ತಾಯಿ ಮತ್ತು ಸಹೋದರ ಆನಂದ್ ಜತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಜಾಲತಾಣ ಜಾಲಾಡಿರುವ ಅಭಿಮಾನಿಗಳು ಇಬ್ಬರೂ ಹಂಚಿಕೊಂಡಿರುವ ಫೋಟೋಗಳ ಸುತ್ತಲಿನ ಪರಿಸರದ ಸಾಮ್ಯತೆಯನ್ನು ಗುರುತಿಸಿದ್ದಾರೆ.

ಆ ಮೂಲಕ ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಇಬ್ಬರೂ ‘ಹ್ಯಾಪಿ ದಿವಾಲಿ ಮೈ ಲವ್ಸ್’ ಎಂದು ಬರೆದುಕೊಂಡಿರುವುದು ಸಹ ಕುತೂಹಲ ಮೂಡಿಸಿದೆ. ಅಂದಹಾಗೆ ಸದ್ಯ ರಶ್ಮಿಕಾ ‘ಪುಷ್ಪ 2 : ದಿ ರೂಲ್’, ‘ಅನಿಮಲ್’ ಹಾಗೂ ‘ರೈನ್‌ಬೋ’ ಚಿತ್ರಗಳಲ್ಲಿ ಬಿಜಿಯಿದ್ದರೆ, ವಿಜಯ್ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net