ಆಪರೇಷನ್ ನಂತರ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯರು: ಬಾಣಂತಿ ಸಾವು, ತಾಯಿ ಪ್ರೀತಿ ಕಾಣದೇ ಮಗು ಅನಾಥ..

operation
ಸಾಂದರ್ಭಿಕ ಚಿತ್ರ
Published on

ನಾಗರಕರ್ನೂಲ್: ಆಪರೇಷನ್ ಮಾಡಿದ ವೈದ್ಯರು ಹೊಟ್ಟೆಯಲ್ಲಿ ಹತ್ತಿಯನ್ನು ಹೊರತೆಗೆಯದೇ ಅಲ್ಲಿಯೇ ಬಿಟ್ಟಿದ್ದರಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿರುವ ಘಟನೆ ತೆಲಂಗಾಣದ ನಾಗರಕರ್ನೂಲ್​ ಬಳಿ ನಡೆದಿದೆ.

ಜಿಲ್ಲೆಯ ಅಚ್ಚಂಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನುಷ ಕೃತ್ಯ ನಡೆದಿದೆ ಎನ್ನಲಾಗಿದ್ದು, ಸಂಬಂಧಿಕರು ಹೇಳುವ ದರ್ಶನಗಡ ತಾಂಡಾದ ಆದಿವಾಸಿ ಮಹಿಳೆ ರೋಜಾ ತುಂಬು ಗರ್ಭಿಣಿಯಾಗಿದ್ದಳು. ಈ ತಿಂಗಳ 15 ರಂದು ಆಕೆಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಕುಟುಂಬಸ್ಥರು ಅಚ್ಚಂಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ವೈದ್ಯರು ಹೆರಿಗೆ ಮಾಡಿದಾಗ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಹೆರಿಗೆಯ ದಿನವೇ ವೈದ್ಯರು ಆಕೆಗೆ ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದು, ಆಪರೇಷನ್ ವೇಳೆ ವೈದ್ಯರು ಹತ್ತಿಯನ್ನು ಮರೆತು ಹೊಟ್ಟೆಗೆ ಹೊಲಿಗೆ ಹಾಕಿದ್ದಾರೆ. ಕೆಲವು ದಿನಗಳ ನಂತರ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಆದರೆ ಆಸ್ಪತ್ರೆಯಿಂದ ಮನೆಗೆ ಬಂದ ರೋಜಾ ಸ್ಥಿತಿ ಗಂಭೀರವಾಗಿದೆ.

ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಮಹಿಳೆಗೆ ತೀವ್ರ ರಕ್ತಸ್ರಾವ ಪ್ರಾರಂಭವಾಯಿತು. ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಮಂಗಳವಾರ ಅಚ್ಚಂಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೂಚಿಸಿದ್ದು,  ಕೂಡಲೇ ಆಕೆಯನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಪರೀಕ್ಷೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಹತ್ತಿಯಿರುವುದು ಕಂಡು ಬಂದಿದೆ.

ಕೊನೆಗೆ ಮಹಿಳೆಯ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದು, ನವಜಾತ ಶಿಶು ತಾಯಿಯಿಲ್ಲದೆ ಪರದಾಡುವಂತಾಗಿದೆ. ಬಳಿಕ ಆಕೆಯ ಮೃತದೇಹವನ್ನು ಇಂದು ಅಚ್ಚಂಪೇಟೆಗೆ ಕೊಂಡೊಯ್ದು ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ನಿರ್ಲಕ್ಷ್ಯದ ಚಿಕಿತ್ಸೆಯಿಂದ ರೋಜಾ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net