

ಮೊರಾದಾಬಾದ್: ಕರೊನಾದಿಂದಾಗಿ ಮೃತಪಟ್ಟ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕರೆದೊಯ್ಯಲು ಬಂದ ವೈದ್ಯರು ಹಾಗೂ ಪೊಲೀಸರ ಮೇಲೆ ನೂರಾರು ಜನರಿದ್ದ ಗುಂಪು ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದೆ. ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದೆ.
ಕರೊನಾ ಸೋಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಉತ್ತರಪ್ರದೇಶದ ಪಟ್ಟಣವಾದ ಮೊರಾದಾಬಾದ್ನ ಹೃದಯಭಾಗದಲ್ಲಿರುವ ನವಾಬ್ಪುರ ಕಾಲನಿಯನ್ನು ಸೀಲ್ಡೌನ್ ಮಾಡಲಾಗಿದೆ. ಇಲ್ಲಿದ್ದ ವ್ಯಕ್ತಿಯೊಬ್ಬ ಕೋವಿಡ್-19 ನಿಂದಾಗಿ ಮೃತಪಟ್ಟಿದ್ದ.
ಮೃತಪಟ್ಟ ಕುಟುಂಬದೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಆಂಬುಲೆನ್ಸ್ನಲ್ಲಿ ಕರೆತರಲು ವೈದ್ಯರ ತಂಡ ತೆರಳಿತ್ತು. ಜತೆಗೆ ಪೊಲೀಸ್ ಸಿಬ್ಬಂದಿ ಕೂಡ ಇದ್ದರು. ಕುಟುಂಬದ ಸದಸ್ಯರು ಆಂಬುಲೆನ್ಸ್ ಹತ್ತುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ವೈದ್ಯರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದ್ದಾರೆ. ಘಟನೆಯಲ್ಲಿ ವಾಹನಗಳು ಜಖಂಗೊಂಡಿವೆ. ಆಂಬುಲೆನ್ಸ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಪಾಠಕ್ ಹೇಳಿದ್ದಾರೆ.
ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ, ಸಾರ್ವಜನಿಕರ ಸ್ವತ್ತುಗಳಿಗೆ ಹಾನಿ ಮಾಡಿದವರಿಂದಲೇ ನಷ್ಟವನ್ನು ಭರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊರಾದಾಬಾದ್ವೊಂದರಲ್ಲೇ 19 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೋಂಕಿತರಿದ್ದ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. (ಏಜೆನ್ಸೀಸ್)