

ವಾಷಿಂಗ್ಟನ್: ಮಹಾಮಾರಿ ಕರೊನಾ ವೈರಸ್ ವಿಶ್ವದ ದೊಡ್ಡಣ ಅಮೆರಿಕದಲ್ಲಿ ಮೃತ್ಯಕೂಪವನ್ನೇ ನಿರ್ಮಿಸಿದ್ದು, ಆರ್ಥಿಕತೆ ದೊಡ್ಡ ಹೊಡೆತವನ್ನೇ ನೀಡಿದೆ. ಹೀಗಾಗಿ ನೆಲಕಚ್ಚಿರುವ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೇಟ್ ಅಮೆರಿಕನ್ ಎಕನಾಮಿಕ್ ರಿವೈವಲ್ ಇಂಡಸ್ಟ್ರಿ ಗ್ರೂಪ್ ರಚಿಸಿದ್ದಾರೆ.
ವಿಶೇಷವೆಂದರೆ ಟ್ರಂಪ್ ರಚಿಸಿರುವ ಗ್ರೂಪ್ನಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಸೇರಿದಂತೆ ಒಟ್ಟು 6 ಮಂದಿ ಇಂಡೋ-ಅಮೆರಿಕನ್ನರಿದ್ದಾರೆ. ವಿವಿಧ ಇಂಡಸ್ಟ್ರಿಗಳಿಂದ 200ಕ್ಕೂ ಹೆಚ್ಚು ವಿವಿಧ ನಾಯಕರುಗಳನ್ನು ಟ್ರಂಪ್ ಆಯ್ಕೆ ಮಾಡಿದ್ದು, ಅವರನ್ನು 12ಕ್ಕೂ ಹೆಚ್ಚು ಗುಂಪುಗಳಾಗಿ ವಿಭಾಗಿಸಿದ್ದಾರೆ. ಇವರಿಂದ ಕುಗ್ಗಿರುವ ಆರ್ಥಿಕ ಪುನಶ್ಚೇತನಕ್ಕೆ ಟ್ರಂಪ್ ಸಲಹೆ ಪಡೆಯಲಿದ್ದಾರೆ.
ಈ ಬಗ್ಗೆ ಮಂಗಳವಾರ ಮಾತನಾಡಿದ್ದ ಟ್ರಂಪ್, ಕೆಲವೊಬ್ಬರ ಹೆಸರುಗಳಿವೆ. ಅವರೆಲ್ಲರು ಅತ್ಯತ್ತಮರು ಎಂದು ನಾನು ಭಾವಿಸಿದ್ದೇನೆ. ಅವರೆಲ್ಲಾ ಆರ್ಥಿಕತೆ ಉತ್ತೇಜನಕ್ಕೆ ಕೆಲ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದ್ದರು.
ಪಿಚೈ ಮತ್ತು ನಾದೆಲ್ಲ ಹೊರತುಪಡಿಸಿ, ಐಬಿಎಂನ ಅರವಿಂದ್ ಕೃಷ್ಣ ಮತ್ತು ಮೈಕ್ರಾನ್ ಟೆಕ್ ಗ್ರೂಪ್ನ ಸಂಜಯ್ ಮೆಲ್ಹೋತ್ರಾ ಕೂಡ ಟ್ರಂಪ್ ಆಯ್ಕೆ ಪಟ್ಟಿಯಲ್ಲಿದ್ದಾರೆ. ಉಳಿದಂತೆ ಆ್ಯಪಲ್ ಸಿಇಒ ಟಿಮ್ ಕುಕ್, ಒರಾಕಲ್ನ ಲಾರಿ ಎಲ್ಲಿಸನ್ ಮತ್ತು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಕೂಡ ಸೇರಿದ್ದಾರೆ.
ಕೃಷಿ, ಬ್ಯಾಂಕಿಂಗ್, ನಿರ್ಮಾಣ/ಕಾರ್ಮಿಕರು/ಕಾರ್ಯಪಡೆ, ರಕ್ಷಣಾ, ಇಂಧನ, ಆರ್ಥಿಕ ಸೇವೆ, ಆಹಾರ ಮತ್ತು ಪಾನೀಯಗಳು, ಆರೋಗ್ಯ, ಆತಿಥ್ಯ, ಉತ್ಪಾದನೆ, ರಿಯಲ್ ಎಸ್ಟೇಟ್, ಚಿಲ್ಲರೆ ವ್ಯಾಪಾರ, ಟೆಕ್, ಟೆಲಿಕಮ್ಯುನಿಕೇಷನ್, ಸಾರಿಗೆ, ಕ್ರೀಡೆ ಮತ್ತು ಚಿಂತನೆಯ ನಾಯಕರು ಎಂಬಿತ್ಯಾದಿ ಗ್ರೂಪ್ಗಳನ್ನು ಟ್ರಂಪ್ ಆರ್ಥಿಕ ಉತ್ತೇಜನಕ್ಕಾಗಿ ಸೃಷ್ಟಿಸಿದ್ದಾರೆ. ಆಯ್ಕೆ ಮಾಡಿರುವ ನಾಯಕರು ಒಂದೊಂದು ಗ್ರೂಪ್ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಮೆರಿಕ ಆರ್ಥಿಕತೆಯನ್ನು ಹಳಿಗೆ ತರಲು ಶ್ರಮಿಸಲಿದ್ದಾರೆ.
ಕರೊನಾ ವೈರಸ್ನಿಂದ ಹೆಚ್ಚು ಬಾಧಿತವಾಗಿರುವ ಅಮೆರಿಕ ಸೋಂಕು ತಡೆಗಟ್ಟಲು ಲಾಕ್ಡೌನ್ ಮೊರೆಹೋಗಿದೆ. ಈಗಾಗಲೇ ಕರೊನಾಗೆ ಅಮೆರಿಕದಲ್ಲಿ 20 ಸಾವಿರಕ್ಕು ಹೆಚ್ಚು ಮಂದಿ ಮೃತರಾಗಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಆರ್ಥಿಕತೆ ಸಾಕಷ್ಟು ಕುಗ್ಗಿರುವುದರಿಂದ ಅದನ್ನು ಸರಿಪಡಿಸಲು ಟ್ರಂಪ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)