ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್: 5 ಬೇಡಿಕೆಗಳನ್ನು ಮುಂದಿಟ್ಟ ಪ್ರತಿಭಟನಾ ನಿರತ ವೈದ್ಯರು

ವಿಜಯವಾಣಿ - 2024-08-17T120327.474
Published on

ಪಶ್ಚಿಮ ಬಂಗಾಳ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ಖಂಡಿಸಿ ಇಂದು 24 ಗಂಟೆಗಳ ಬೃಹತ್ ಪ್ರತಿಭಟನೆ ಕೈಗೊಂಡಿರುವ ವೈದ್ಯಕೀಯ ಸಿಬ್ಬಂದಿ, ಆರೋಪಿಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನಿರಂತರವಾಗಿ ಧರಣಿ ನಡೆಸುತ್ತಿರುವ ಮಹಿಳಾ ವೈದ್ಯರು, ಇಂದು ದೇಶವ್ಯಾಪಿ ಮೆಡಿಕಲ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಯನ್ನು ಒತ್ತಿ ಹೇಳುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಆ.18ರ ಮುಂಜಾನೆ 6 ಗಂಟೆಯವರೆಗೂ ಈ ಮುಷ್ಕರ ನಡೆಯಲಿದ್ದು, 24 ಗಂಟೆಗಳ ಅವಧಿ ದೇಶವ್ಯಾಪಿ ತುರ್ತು ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಘವು ಘೋಷಿಸಿದೆ.

ಅತ್ಯಾಚಾರಕ್ಕೆ ತುತ್ತಾದ ಟ್ರೈನಿ ವೈದ್ಯೆಯ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದ್ದು, ನ್ಯಾಯಕ್ಕಾಗಿ ಕಂಬನಿ ಮಿಡಿದಿದ್ದಾರೆ. ತಮ್ಮ ಸ್ನೇಹಿತೆಯ ಸಾವಿಗೆ ನ್ಯಾಯ ದೊರಕಬೇಕು, ತಪ್ಪಿತಸ್ಥರಿಗೆ ಕಾನೂನು ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಅಲ್ಲಿಯವರೆಗೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಕೊಲ್ಕತ್ತಾ ವೈದ್ಯಕೀಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಇದೀಗ ಪ್ರತಿಭಟನಾ ನಿರತ ವೈದ್ಯರ ಪರವಾಗಿ ಕೇಂದ್ರ ಸರ್ಕಾರಕ್ಕೆ ಐದು ಬೇಡಿಕೆಯಿಟ್ಟಿರುವ ಭಾರತೀಯ ವೈದ್ಯಕೀಯ ಸಂಘ, ಇಷ್ಟನ್ನೂ ಶೀಘ್ರವೇ ಜಾರಿಗೊಳಿಸಬೇಕು ಎಂದು ಮನವಿ ಮಾಡಿದೆ.

ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ವೈದ್ಯರು ಮುಂದಿಟ್ಟ 5 ಬೇಡಿಕೆಗಳು ಹೀಗಿವೆ:

ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧದ ಹಿಂಸಾಚಾರ ತಡೆಗಟ್ಟಲು ಪ್ರತ್ಯೇಕ ಕಾನೂನು ಕಾಯ್ದೆ ತರಬೇಕು. ವೈದ್ಯರಿಗೆ ಎದುರಾಗುವ ಸಮಸ್ಯೆಗಳಿಗೆ ಮಹತ್ವದ ನೀತಿಯನ್ನು ಜಾರಿಗೊಳಿಸಬೇಕು.

ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ಆಸ್ಪತ್ರೆಗಳ ಭದ್ರತಾ ಪ್ರೋಟೋಕಾಲ್‌ಗಳು ಏರ್​ಪೋರ್ಟ್​ಗಿಂತಲೂ ಹೆಚ್ಚಿರಬೇಕು. ಯಾವುದೇ ಕಾರಣಕ್ಕೂ ಅದಕ್ಕಿಂತ ಕಡಿಮೆಯಿರಬಾರದು. ಆಸ್ಪತ್ರೆಗಳನ್ನು ಕಡ್ಡಾಯ ಭದ್ರತಾ ಅರ್ಹತೆಗಳೊಂದಿಗೆ ಸುರಕ್ಷಿತ ವಲಯಗಳಾಗಿ ಘೋಷಿಸುವುದು ಮೊದಲ ಹಂತದ ರಕ್ಷಣೆಯಾಗಿದೆ. ಸಿಸಿಟಿವಿ, ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಪ್ರೋಟೋಕಾಲ್‌ಗಳ ವ್ಯವಸ್ಥೆ ಅತ್ಯಗತ್ಯ.

ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಟ್ರೈನಿ ವೈದ್ಯೆಯಿದ್ದ 36 ಗಂಟೆಗಳ ಡ್ಯೂಟಿ ಶಿಫ್ಟ್ ಮತ್ತು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳಗಳ ಕೊರತೆ ಸೇರಿದಂತೆ ನಿವಾಸಿ ವೈದ್ಯರ ಕೆಲಸದ ಮತ್ತು ಜೀವನ ಪರಿಸ್ಥಿತಿಗಳ ಸಂಪೂರ್ಣ ಕೂಲಂಕುಷ ಪರೀಕ್ಷೆ ಅಗತ್ಯ ಎಂದು ಐಎಂಎ ತಿಳಿಸಿದೆ.

ಕೋಲ್ಕತ್ತಾದಲ್ಲಿ ನಡೆದ ಭೀಕರ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಸಾಕ್ಷ್ಯ ನಾಶಪಡಿಸಲು ಆಸ್ಪತ್ರೆಯೊಳಗೆ ನುಗ್ಗಿ, ವಿಧ್ವಂಸಕ ಕೃತ್ಯದಲ್ಲಿ ತೊಡಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆ ವಿಧಿಸಲೇಬೇಕು. ಇದು ನಮ್ಮ ಆಗ್ರಹ.

ಈ ಘಟನೆಗೆ ಅನುಗುಣವಾಗಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಮತ್ತು ಗೌರವಾನ್ವಿತ ಪರಿಹಾರವನ್ನು ಸರ್ಕಾರ ಒದಗಿಸಿಕೊಡುವುದು ಸೂಕ್ತ ಎಂದು ಐದು ಬೇಡಿಕೆಗಳನ್ನು ಈಡೇರಿಸುವಂತೆ ಇದೀಗ ಭಾರತೀಯ ವೈದ್ಯಕೀಯ ಸಂಘವು ಒತ್ತಾಯಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net