ಸ್ಟೈಫಂಡ್ ಪರಿಷ್ಕರಣೆಗೆ ವೈದ್ಯರ ಆಗ್ರಹ: ನಗರದಲ್ಲಿ ಸ್ನಾತಕೋತ್ತರ ಪದವೀಧರರ ಧರಣಿ

Doctors demand for stipend revision Mandya
Published on

ಮಂಡ್ಯ: ಸರ್ಕಾರಿ ವೈದ್ಯಕೀಯ ಕಾಲೇಜುಗಳ ರೆಸಿಡೆಂಟ್ ವೈದ್ಯರಿಗೆ ನೀಡುವ ಸ್ಟೈಫಂಡ್ ಪರಿಷ್ಕರಣೆಗಾಗಿ ಒತ್ತಾಯಿಸಿ ಸ್ನಾತಕೋತ್ತರ ಪದವೀಧರರು, ಸೂಪರ್ ಸ್ಪೆಷಾಲಿಟಿ ನಿವಾಸಿಗಳು ಮತ್ತು ಹಿರಿಯ ನಿವಾಸಿ ವೈದ್ಯರು ಮಿಮ್ಸ್ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಇತರೆ ರಾಜ್ಯಗಳಲ್ಲಿನ ವೈದ್ಯರು ಶೇ.50ರಷ್ಟು ಹೆಚ್ಚುವರಿ ಸ್ಟೈಫಂಡ್ ಪಡೆಯುತ್ತಿದ್ದಾರೆ. ನಮಗೆ ಅತ್ಯಂತ ಕಡಿಮೆ ನೀಡಲಾಗುತ್ತಿದೆ. ಇದು ಹಣದುಬ್ಬರದಿಂದ ಉಲ್ಬಣಗೊಂಡ ಜೀವನ ವೆಚ್ಚ, ಶೈಕ್ಷಣಿಕ ವೆಚ್ಚ ಮತ್ತು ಕುಟುಂಬದ ಅಗತ್ಯಗಳನ್ನು ಸರಿದೂಗಿಸಲು ವಿಫಲವಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಮತ್ತು ಧೀರ್ಘಾವಧಿ ಕೆಲಸ ಮಾಡಿದರೂ, ನಮ್ಮ ಸ್ಟೈಫಂಡ್ ಬದಲಾಗದೆ ಮತ್ತು ಸಾಕಷ್ಟಿಲ್ಲ. ಅಲ್ಲದೆ, ವೈದ್ಯಕೀಯ ಕೋರ್ಸ್‌ಗಳ ಶುಲ್ಕವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಧಿಕವಾಗಿದೆ ಎದು ಆರೋಪಿಸಿದರು.

ಸ್ಟೈಫಂಡ್ ಹೆಚ್ಚಳಕ್ಕೆ ವಿನಂತಿಸಿ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಆ.5ರಿಂದಲೇ ಶಾಂತಿಯುತ ಪ್ರತಿಭಟನೆ ಪ್ರಾರಂಭಿಸಿದ್ದೇವೆ. ಎಲ್ಲ ವೈದ್ಯಕೀಯ ಕಾಲೇಜುಗಳ ಡೀನ್‌ಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರತಿಭಟನೆ ವೇಳೆ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ನಮ್ಮ ಸೇವೆ ನೀಡದೆ ಹಿಂದೆ ಸರಿಯುತ್ತಿದ್ದೇವೆ. ಇದರಿಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ಯಾವುದೇ ಅನಾನುಕೂಲಕ್ಕೆ ವಿಷಾದಿಸುತ್ತೇವೆ. ಈಗಲಾದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಾ.ಮೆರಿನ್ ಜೋಸೆಪ್, ಡಾ.ಜರೀನ್, ಡಾ.ಮೋಹಿತ್, ಡಾ.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net