

Infection : ಜನನಾಂಗದಲ್ಲಿ ಸೋಂಕು ಇದೆ ಎಂದು ಹೇಳಿದ ವೈದ್ಯರು ರೋಗಿಯ ಅನುಮತಿ ಪಡೆಯದೇ ಖಾಸಗಿ ಅಂಗವನ್ನು ಕಟ್ ಮಾಡಿದ ಘಟನೆ ಅಸ್ಸಾಂ ಸಿಲ್ಚರ್ನಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಅಸ್ಸಾಂ ಸಿಎಂ ಹಿಮಂತ ಬಿಸ್ವಾಗೆ ದೂರು ನೀಡಿದ್ದಾನೆ ಎಂದು ಗುರುವಾರ ವರದಿಯಾಗಿದೆ.
ಅಸ್ಸಾಂನ ಸಿಲ್ಚರ್ನಲ್ಲಿರುವ ಈಡಾನ್ ಸಿನ್ಹಾ ಎಂಬ ಖಾಸಗಿ ವೈದ್ಯ ಬಯಾಪ್ಸಿ ಹೆಸರಲ್ಲಿ ಜನನಾಂಗದಲ್ಲಿನ ಸೋಂಕಿಗೆ ಚಿಕಿತ್ಸೆ ನೀಡುವ ಬದಲು ಸಂತ್ರಸ್ತ ಅತಿಕುರ್ ರೆಹಮಾನ್ ಎಂಬಾತನ ಖಾಸಗಿ ಅಂಗ ಕಟ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಅತಿಕುರ್ ಮಣಿಪುರದ ಜಿರಿಬಮ್ ನಿವಾಸಿ. ಇತ್ತೀಚೆಗೆ ಖಾಸಗಿ ಭಾಗದಲ್ಲಿ ಸೋಂಕಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪರೀಕ್ಷೆಯ ನಂತರ, ಆರೋಪಿ ವೈದ್ಯ ಈಡನ್ ಸಿನ್ಹಾ ಬಯಾಪ್ಸಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದ್ದಾರೆ.
ಜೂ.19 ರಂದು ಅತಿಕುರ್ಗೆ ಬಯಾಪ್ಸಿ ಮಾಡಬೇಕಿತ್ತು. ಬಯಾಪ್ಸಿ ಹೆಸರಿನಲ್ಲಿ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿ ಆರೋಪಿ ವೈದ್ಯರು ತಮ್ಮ ಅನುಮತಿಯಿಲ್ಲದೆ ಅವರ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಕತ್ತರಿಸಿ ಹಾಕಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅತಿಕುರ್ಗೆ ಅದರ ಬಗ್ಗೆ ತಕ್ಷಣವೇ ತಿಳಿದಿರಲಿಲ್ಲ. ಆದರೆ, ಡ್ರೆಸ್ಸಿಂಗ್ ತೆಗೆದ ನಂತರ ಅವರು ಆಘಾತಕ್ಕೊಳಗಾದರು.
ಆರೋಪಿ ವೈದ್ಯರನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಆಸ್ಪತ್ರೆ ಸಿಬ್ಬಂದಿ ಅವರನ್ನು ಭೇಟಿಯಾಗದಂತೆ ತಡೆದರು ಎಂದು ಅತಿಕುರ್ ಆರೋಪಿಸಿದ್ದಾರೆ. ಇದಾದ ನಂತರ, ಅವರು ಗಂಗೂರ್ ಪೊಲೀಸ್ ಠಾಣೆಯಲ್ಲಿ ಡಾ. ಈಡನ್ ಸಿನ್ಹಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ, ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಿಎಂಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. (ಏಜೆನ್ಸೀಸ್)