

ಮಧ್ಯಪ್ರದೇಶ: ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದಂಪತಿಗಳು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಈ ವೇಳೆ ಮನೆಯಲ್ಲಿ ಮಗನಿಲ್ಲದ ಸಮಯವನ್ನು ನೋಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಕಾರಣವೇನು ಎಂಬುದನ್ನು ಡೆತ್ ನೋಟ್ನಲ್ಲಿ ಬರೆದಿಟ್ಟ ದಂಪತಿಗಳ ಸಾವಿನ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಬಿನಾ ಪಟ್ಟಣದ ನಂದನ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ವೈದ್ಯರಾದ ಬಲ್ಬೀರ್ ಮತ್ತು ಮಂಜು ಕೈಥೋರಿಯಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ದಂಪತಿಯ ಪುತ್ರ ಇಂದು ಬೆಳಗ್ಗೆ ಮನೆಗೆ ಭೇಟಿ ನೀಡಿದಾಗ ಇಬ್ಬರು ಸಾವಿಗೆ ಶರಣಾಗಿರುವುದು ಕಂಡುಬಂದಿದೆ. ಬಲ್ಬೀರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತ್ನಿಯ ಶವ ಹಾಸಿಗೆಯ ಮೇಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇಲ್ನೋಟಕ್ಕೆ ಮಹಿಳೆ ವಿಷಕಾರಿ ಪದಾರ್ಥವನ್ನು ಸೇವಿಸಿರಬಹುದು ಅಥವಾ ಚುಚ್ಚುಮದ್ದಿನ ಬಳಿಕ ಸಾವನ್ನಪ್ಪಿರಬಹುದು. ರೂಮ್ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ದಂಪತಿಗಳು ಸಾಲಬಾಧೆ ತಾಳಲಾರದೆ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರು ರಾಜ್ಯ ಆರೋಗ್ಯ ಇಲಾಖೆಯ ವೈದ್ಯರಾಗಿದ್ದು, ಬಲ್ಬೀರ್ ಅವರನ್ನು ಕುರ್ವೈನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು ಹಾಗೂ ಪತ್ನಿ ಮಂಜು ಬೀನಾ ಸಿವಿಲ್ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರಾಗಿದ್ದರು ಎಂದು ವರದಿ ತಿಳಿಸಿದೆ. ಘಟನೆಯ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).