

Vijay Mallya: ವಿದೇಶದಲ್ಲಿ ನೆಲೆಸಿದ್ದರೂ ಭಾರತದಲ್ಲಿ ಇಂದಿಗೂ ಸಾಕಷ್ಟು ಜನಪ್ರಿಯತೆ ಹೊಂದಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಒಡೆಯ, ಖ್ಯಾತ ಉದ್ಯಮಿ ವಿಜಯ್ ಮಲ್ಯ, ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿ ಮಿಂಚಿದ್ದ ಮಲ್ಯ, ತಮ್ಮದೇ ವಿಮಾನಯಾನ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ, ಖ್ಯಾತಿ ಹೆಚ್ಚಿಸಿಕೊಂಡಿದ್ದ ದೈತ್ಯ ಉದ್ಯಮಿ. ಕ್ರಿಮಿನಲ್ ಕೇಸ್ನಡಿ ಸದ್ಯ ಭಾರತದಿಂದ ಹೊರಗಿರುವ ಮಲ್ಯ, ಲಂಡನ್ನಲ್ಲಿ ಜೀವನ ನಡೆಸುತ್ತಿದ್ದಾರೆ. ಬಹುವರ್ಷಗಳ ನಂತರ ಪಾಡ್ಕಾಸ್ಟ್ನ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಲವು ರೋಚಕ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವುದೇ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಅಂದು ವಿಜಯ್ ಮಲ್ಯ ಒಡೆತನದಲ್ಲಿದ್ದ ಐಷಾರಾಮಿ ಗೋವಾ ವಿಲ್ಲಾ ಈಗ ಬಾಲಿವುಡ್ ಸೆಲೆಬ್ರಿಟಿಯ ಪಾಲಾಗಿದೆ. ಕಿಂಗ್‌ಫಿಶರ್ ವಿಲ್ಲಾ ಎಂದಿದ್ದ ಹೆಸರು ಈಗ ಕಿಂಗ್ಸ್ ಮ್ಯಾನ್ಷನ್ ಎಂದು ಬದಲಾಗಿದೆ. ಗೋವಾದಲ್ಲಿರುವ ಐಕಾನಿಕ್ ಕಿಂಗ್‌ಫಿಶರ್ ವಿಲ್ಲಾವನ್ನು 2017ರಲ್ಲಿ ಬಾಲಿವುಡ್ ನಟ ಸಚಿನ್ ಜೋಶಿ ಮತ್ತು ಅವರ ಪತ್ನಿ (ಮಾಜಿ ನಟಿ ಊರ್ವಶಿ ಶರ್ಮಾ) ಖರೀದಿ ಮಾಡಿದರು. ಒಂದು ಕಾಲದಲ್ಲಿ ಐಷಾರಾಮಿ ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದ ಈ ವಿಲ್ಲಾ, ಮಲ್ಯ ಅವರ ಐಷಾರಾಮಿ ಜೀವನಶೈಲಿಗೆ ಸಾಕ್ಷಿಯಾಗಿತ್ತು ಎಂಬುದಕ್ಕೆ ಎರಡನೇ ಮಾತಿಲ್ಲ.
ಐಡಿಬಿಐ ಬ್ಯಾಂಕ್ 900 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡ ಆರೋಪದ ಬೆನ್ನಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ವಿಲ್ಲಾವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿತು. ಆಸ್ತಿಯನ್ನು ಹರಾಜು ಹಾಕಲು ಹಲವಾರು ಪ್ರಯತ್ನಗಳು ವಿಫಲವಾದವು. ನಂತರ, ಸಚಿನ್ ಜೋಶಿ 2017ರಲ್ಲಿ ಈ ವಿಲ್ಲಾವನ್ನು ಬರೋಬ್ಬರಿ 73.01 ಕೋಟಿ ರೂ.ಗೆ ಖರೀದಿಸಿದರು. ಇದು ಈಗ ಅವರ ಒಡೆತನದಲ್ಲಿದ್ದು, ಮಲ್ಯ ಇಟ್ಟಿದ್ದ ಹೆಸರನ್ನು ಬದಲಿಸಿ ಕಿಂಗ್ಸ್ ಮ್ಯಾನ್ಷನ್ ಎಂದು ಹೆಸರಿಟ್ಟಿದ್ದಾರೆ.
ಫೋರ್ಬ್ಸ್ ದಿ ಇಂಡಿಪೆಂಡೆಂಟ್ (ಯುಕೆ) ಮಾಹಿತಿ ಪ್ರಕಾರ, ಕಿಂಗ್‌ಫಿಶರ್ ಏರ್‌ಲೈನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರ ನಿವ್ವಳ ಮೌಲ್ಯವು 2013ರಲ್ಲಿ 750 ಮಿಲಿಯನ್ ಡಾಲರ್ನಿಂದ ಜುಲೈ 2022ರ ಹೊತ್ತಿಗೆ 1.2 ಬಿಲಿಯನ್ ಡಾಲರ್ಗೆ ಏರಿದೆ. ಆದಾಗ್ಯೂ, ಅವರ ಏರ್‌ಲೈನ್ಸ್ ಸಾಮ್ರಾಜ್ಯದ ಆರ್ಥಿಕ ಕುಸಿತ ಮತ್ತು ಕಾನೂನು ಸವಾಲುಗಳು ಮಲ್ಯರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿವೆ.
28ನೇ ವಯಸ್ಸಿನಲ್ಲಿ, ಮಲ್ಯ ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಅಧ್ಯಕ್ಷರಾದ ಅವರು, ತಮ್ಮ ವ್ಯವಹಾರವನ್ನು ಮದ್ಯ, ಏರ್‌ಲೈನ್ಸ್, ರಿಯಲ್ ಎಸ್ಟೇಟ್ ಮತ್ತು ಕ್ರೀಡೆಗಳಲ್ಲಿ ಹೂಡಿಕೆ ಮಾಡಿದರು. ಈ ಮೂಲಕ ದೊಡ್ಡ ಮಟ್ಟದಲ್ಲಿ ತಮ್ಮ ಬ್ರ್ಯಾಂಡ್ನ ಮೌಲ್ಯವನ್ನು ಕೊಂಡೊಯ್ದರು. ಇಷ್ಟಲ್ಲದೇ ಫಾರ್ಮುಲಾ 1ರಲ್ಲಿ ಪ್ರಾಯೋಜಕತ್ವದ ಒಪ್ಪಂದಗಳೊಂದಿಗೆ ಪ್ರಮುಖ ಉದ್ಯಮಿಯಾಗಿಯೂ ಮಿಂಚಿದರು.
ಆಸ್ತಿಗಳ ವಿಷಯದಲ್ಲಿ ನೋಡುವುದಾದರೆ, ಪ್ರಸ್ತುತ ಮಲ್ಯ ನ್ಯೂಯಾರ್ಕ್‌ನ ಟ್ರಂಪ್ ಪ್ಲಾಜಾದಲ್ಲಿ ಒಂದು ಪೆಂಟ್‌ಹೌಸ್ ಮತ್ತು ಮೂರು ಐಷಾರಾಮಿ ಕಾಂಡೋಗಳನ್ನು ಹೊಂದಿದ್ದಾರೆ. ಅವುಗಳ ಪೈಕಿ ಕೆಲವನ್ನು ಅವರ ಮಗಳೊಂದಿಗೆ ಸಹ-ಮಾಲೀಕತ್ವವನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಮಲ್ಯ ಫ್ರಾನ್ಸ್‌ನ ಸೇಂಟ್-ಮಾರ್ಗರೈಟ್ ದ್ವೀಪದಲ್ಲಿ ಒಂದು ಎಸ್ಟೇಟ್ ಅನ್ನು ಸಹ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).