

Dulquer Salmaan: ಮಣಿರತ್ನಂ ನಿರ್ದೇಶನದ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ತಮಿಳು ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರಕ್ಕೆ ಇದೀಗ ತಮಿಳುನಾಡಿನಲ್ಲೇ ಭಾರಿ ಮುಖಭಂಗ ಉಂಟಾಗಿದೆ. ಇದೇ ಜೂನ್ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರ, ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಡುಗಡೆಗೊಂಡಿದೆ. ಆದರೆ, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಮುಗ್ಗರಿಸಿದೆ.
ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಎನ್ನಲಾದ ಈ ಚಿತ್ರಕ್ಕೆ ಸ್ವತಃ ತಮಿಳುನಾಡಿನಲ್ಲೇ ಉತ್ತಮ ಪ್ರತಿಕ್ರಿಯೆ ಲಭಿಸದೆ ಇರುವುದು ದುರಾದೃಷ್ಟಕರ. ಇದು ಚಿತ್ರಕ್ಕೆ ತವರಿನಲ್ಲೇ ಭಾರೀ ಮುಖಭಂಗ ಉಂಟುಮಾಡಿದೆ. ಒಂದೆಡೆ ಕರ್ನಾಟಕ ಹೈಕೋರ್ಟ್ 'ಥಗ್ ಲೈಫ್' ಚಿತ್ರದ ರಿಲೀಸ್ಗೆ ಕರುನಾಡಿನಲ್ಲಿ ಇನ್ನೂ ಅನುಮತಿ ನೀಡಿಲ್ಲ. ಇದೊಂದು ಸೋಲಾದರೆ, ಮತ್ತೊಂದೆಡೆ ನೆಟ್ಟಿಗರು ಜಾಲತಾಣಗಳಲ್ಲಿ ಚಿತ್ರ ಕುರಿತಂತೆ ನೆಗೆಟಿವ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನಟ ದುಲ್ಕರ್ ಸಲ್ಮಾನ್ ನಿರ್ಧಾರಕ್ಕೆ ಸಿನಿಪ್ರಿಯರು ಬೆನ್ನುತಟ್ಟಿದ್ದಾರೆ.
ಅಸಲಿಗೆ ಕಮಲ್ ಹಾಸನ್ 'ಥಗ್ ಲೈಫ್'ನಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕೂಡ ನಟಿಸಬೇಕಿತ್ತು. ಆದರೆ, ಅವರು ಒಪ್ಪಿಗೆ ಸೂಚಿಸಲಿಲ್ಲ. ಬದಲಿಗೆ ಚಿತ್ರದ ಭಾಗವಾಗಲು ನಿರಾಕರಿಸಿದರು. ಈ ನಿರ್ಧಾರವನ್ನು ಇದೀಗ ಮೆಚ್ಚಿಕೊಂಡಿರುವ ನೆಟ್ಟಿಗರು, ಜಾಲತಾಣಗಳಲ್ಲಿ ದುಲ್ಕರ್ ಪರ ಬ್ಯಾಟ್ ಬೀಸಿದ್ದಾರೆ. ಈ ಚಿತ್ರದ ಆಫರ್ ತಿರಸ್ಕರಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ರಿ ಎಂದು ಒಬ್ಬರು ಹೇಳಿದರೆ, ಇಲ್ಲಿಯವರೆಗೂ ನೀವು ಮಾಡಿರುವ ನಿರ್ಧಾರಗಳಲ್ಲಿ ಥಗ್ ಲೈಫ್ ಕೈಬಿಟ್ಟಿದ್ದು ಅತ್ಯುತ್ತಮ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದೇ 'ಥಗ್ ಲೈಫ್' ಟ್ರೇಲರ್ ರಿಲೀಸ್ ಆದಾಗ ಹಲವರು ಸಲ್ಮಾನ್ ನಿರ್ಧಾರದಿಂದ ಸಿಡಿಮಿಡಿಗೊಂಡಿದ್ದರು. ಅದೇ ಚಿತ್ರ ತೆರೆಕಂಡ ಬಳಿಕ ಅವರ ನಿರ್ಧಾರವನ್ನು ಕೊಂಡಾಡುತ್ತಿದ್ದಾರೆ. 'ಕಥೆ ಮತ್ತು ಕಥಾಹಂದರ ಆಯ್ಕೆ ಮಾಡುವಲ್ಲಿ ದುಲ್ಕರ್ ಸಲ್ಮಾನ್ ಎತ್ತಿದಕೈ. ಈ ಸಿನಿಮಾದಲ್ಲಿ ನಟಿಸದೆ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು' ಎಂದು ಮತ್ತೊಬ್ಬರು ಹೇಳಿದ್ದಾರೆ,(ಏಜೆನ್ಸೀಸ್).