

Pahalgam: ಉಗ್ರರ ಭೀಕರ ಗುಂಡಿನ ದಾಳಿ ಘಟನೆ ನಡೆದು ಇಂದಿಗೆ 45 ದಿನಗಳು ಕಳೆದಿದ್ದೇ ಆದರೂ ಪ್ರವಾಸಿಗರ ಆಗಮನವಿಲ್ಲದೆ ಪಹಲ್ಗಾಮ್ ಬಿಕೋ ಎನ್ನುತ್ತಿದೆ. 26 ಅಮಾಯಕರು ಜೀವ ಕಳೆದುಕೊಂಡ ಸ್ಥಳಕ್ಕೆ ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿಲ್ಲ. ಸದ್ಯ ಇದೇ ಅಲ್ಲಿನ ಕ್ಯಾಬ್ ಚಾಲಕರು, ಸ್ಥಳೀಯ ವ್ಯಾಪಾರಸ್ಥರಿಗೆ ದೊಡ್ಡ ತಲೆನೋವಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಪ್ರವಾಸಿಗರಿಂದಲೇ ತುಂಬಿ ತುಳುಕುವ ಪಹಲ್ಗಾಮ್ ಟ್ಯಾಕ್ಸಿ ಸ್ಟಾಂಡ್, ಸದ್ಯ ಉಗ್ರರ ದಾಳಿ ಹಿನ್ನೆಲೆ ಜನರಿಲ್ಲದೆ ಖಾಲಿಯಾಗಿದೆ. ಇದರ ಪರಿಣಾಮ ನೂರಾರು ಸ್ಥಳೀಯ ವ್ಯಾಪಾರಿಗಳು ಮತ್ತು ಕ್ಯಾಬ್ ಚಾಲಕರು, ಗೈಡ್ಗಳು ಆದಾಯವಿಲ್ಲದೆ ತೀರ ಹೆಣಗಾಡುವಂತ ಪರಿಸ್ಥಿತಿ ತಲುಪಿದ್ದಾರೆ. ಇತ್ತ ಲಾಭವೂ ಇಲ್ಲ, ಸರಿಯಾದ ಆದಾಯವೂ ಇಲ್ಲ. ಕಾರಿನ ಸಾಲ ತೀರಿಸಲು ಆಗ್ತಿಲ್ಲ ಎಂದು ಕೆಲವರು ತಮ್ಮ ಕ್ಯಾಬ್ ಮಾರಾಟ ಮಾಡಲು ಮುಂದಾಗಿದ್ದಾರೆ.
ಕಳೆದ 4 ವರ್ಷಗಳಿಂದ ಪಹಲ್ಗಾಮ್ನಲ್ಲೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ನಜೀರ್ ಅಹ್ಮದ್ ಮಾತನಾಡಿ, "ಒಂದು ದಿನಕ್ಕೆ 500ಕ್ಕೂ ಹೆಚ್ಚು ವಾಹನಗಳು ಮತ್ತು 1200ಕ್ಕೂ ಅಧಿಕ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಸ್ಥಳ ಈಗ ಮರುಭೂಮಿಯಂತಾಗಿದೆ. ಸದ್ಯ ನಾವೆಲ್ಲ ಅಮರನಾಥ ಯಾತ್ರೆಗಾಗಿ ಕಾಯುತ್ತಿದ್ದೇವೆ. ಪ್ರಸ್ತುತ ಬಿಕ್ಕಟ್ಟಿನಿಂದ ಒಂದು ದಿನಕ್ಕೆ ಲಕ್ಷಾಂತರ ರೂ. ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳ ಸ್ಕೂಲ್ ಫೀಜ್ ಮತ್ತು ಮನೆಯವರಿಗೆ ಊಟ ಹಾಕಲು ಗೋಳಾಡುವ ಪರಿಸ್ಥಿತಿ ಎದುರಾಗಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.