

ಪದ್ಮಾಸನವು ಸುಖಕರವಾಗಿ ಕುಳಿತುಕೊಳ್ಳುವ ಭಂಗಿಯಾಗಿದೆ. ಧ್ಯಾನ ಮತ್ತು ಪ್ರಾಣಾಯಮ ಮಾಡುವುದಕ್ಕೆ ಹೇಳಿ ಮಾಡಿಸಿದ ಭಂಗಿ. ಈ ತಾವರೆ ಹೆಸರಿನ ಆಸನವಾದ ಪದ್ಮಾಸನದಲ್ಲಿ ನಮಸ್ಕಾರ ಮುದ್ರೆ ಮಾಡುವುದು ದೈವಿಕ ಭಾವನೆ ಮೂಡಿಸುತ್ತದೆ.
ಪ್ರಯೋಜನಗಳು: ಪದ್ಮಾಸನ ಮಾಡುವುದರಿಂದ ಕಾಲಿನ ನರ, ಹೊಟ್ಟೆ, ಬೆನ್ನು, ಸೊಂಟ, ಮಂಡಿ ಇತ್ಯಾದಿ ಅಂಗಗಳಿಗೆ ಹೊಸ ಹುರುಪು ಲಭಿಸಿ, ಚುರುಕುಗೊಳ್ಳುತ್ತವೆ. ಒಮ್ಮೆ ಅಭ್ಯಾಸವಾದರೆ ನೆಲದಲ್ಲಿ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ಹೊಟ್ಟೆ ತೆಳ್ಳಗಾಗಿ ದೇಹಕ್ಕೆ ಒಂದು ರೀತಿಯ ಸೌಂದರ್ಯ ಕಂಡುಬರುತ್ತದೆ. ಕಾಲು ಸೆಳೆತ, ಮಂಡಿ ನೋವು ಮುಂತಾದವು ಹತ್ತಿರ ಸುಳಿಯುವುದಿಲ್ಲ.
ಪದ್ಮಾಸನದಲ್ಲಿ ನಮಸ್ಕಾರ ಮುದ್ರೆ ಮಾಡುವುದರಿಂದ ದೈವಿಕ ಭಾವನೆ ಮೂಡುತ್ತದೆ. ಅಹಂಭಾವ ಕಡಿಮೆಯಾಗುತ್ತದೆ. ಆತಂಕ, ಒತ್ತಡಗಳು ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ. ಹೃದಯ ವಿಶಾಲವಾಗುತ್ತದೆ. ಈ ಮುದ್ರೆ ಧರಿಸಿದಾಗ ದೇಹದಲ್ಲಿನ ಪಂಚತತ್ವಗಳು ಸಮತೋಲನ ಹೊಂದುತ್ತವೆ. ಸಹಸ್ರಾಧಾರ ಚಕ್ರ, ಜ್ಞಾನಯೋಗ ಚಕ್ರ, ಭಕ್ತಿಯೋಗ ಚಕ್ರಗಳು ಸುಸ್ಥಿತಿಯಲ್ಲಿರುತ್ತವೆ. ಇದರಿಂದ ತೋಳುಗಳು ಭುಜಗಳು ಬಲಗೊಳ್ಳುತ್ತವೆ.
ಅಭ್ಯಾಸ ಕ್ರಮ: ಜಮಖಾನದ ಮೇಲೆ ಕಾಲುಗಳನ್ನು ಚಾಚಿಕೊಂಡು ದಂಡಾಸನದಲ್ಲಿ ಕುಳಿತುಕೊಳ್ಳುವುದು. ಎರಡೂ ಕೈಗಳ ಸಹಾಯದಿಂದ ಬಲಗಾಲನ್ನು ಮಡಿಚಿಕೊಂಡು ಎಡತೊಡೆಯ ಮೇಲೆ ಮತ್ತು ಎಡಗಾಲನ್ನು ಮಡಿಚಿಕೊಂಡು ಬಲತೊಡೆಯ ಮೇಲೆ ಇರಿಸುವುದು. ಕೈಗಳಲ್ಲಿ ತೋರುಬೆರಳು ಮತ್ತು ಹೆಬ್ಬೆರಳಿನ ಚಿನ್ಮುದ್ರೆ ಹಿಡಿಯುವುದು. ಬೆನ್ನು, ಕುತ್ತಿಗೆ ನೇರವಾಗಿರಬೇಕು. ದೇಹ ಸಡಿಲವಾಗಿರಬೇಕು. ಇದು ಪದ್ಮಾಸನದ ಭಂಗಿ.
ಈಗ ಕೈಗಳನ್ನು ನಮಸ್ಕಾರ ಮುದ್ರೆ ಮಾಡಲು - ಕೈಗಳನ್ನು ತಿರುಗಿಸಿಕೊಂಡು, ಉಸಿರನ್ನು ತೆಗೆದುಕೊಳ್ಳುತ್ತಾ, ಶಿರಸ್ಸಿನ ಮೇಲೆ ತಂದು ಮುಗಿಯಬೇಕು. ಹಾಯಾಗಿರಬೇಕು, ದೃಷ್ಟಿ ನೇರವಾಗಿಟ್ಟುಕೊಳ್ಳಬೇಕು. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ನಂತರ ಕೈಗಳನ್ನು ತಿರುಗಿಸಿಕೊಂಡು, ಉಸಿರನ್ನು ಬಿಡುತ್ತಾ, ಕೆಳಗಿಳಿಸಬೇಕು. ಒಮ್ಮೆ ಅಭ್ಯಾಸವಾದ ಮೇಲೆ 2-3 ಬಾರಿ ಮಾಡಬಹುದು. ನಂತರ ಕಾಲುಗಳನ್ನು ವಿಸ್ತರಿಸಿಕೊಂಡು ವಿಶ್ರಾಂತಿ ಪಡೆಯಬೇಕು.
ತೀರಾ ಮಂಡಿನೋವು, ಸೊಂಟ ನೋವು ಇರುವವರು ಮಾಡಬಾರದು.