Google Pay, Phone Payನಲ್ಲಿ ಮತದಾರರಿಗೆ ಹಣದ ಆಮೀಷ ಒಡ್ಡುತ್ತಿರುವ ಚುನಾವಣಾ ಅಭ್ಯರ್ಥಿಗಳು!

Google Pay
Published on

ಚೆನ್ನೈ: ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಹಲವಾರು ವಿಧಗಳಲ್ಲಿ ಆಮೀಷ ಒಡ್ಡುತ್ತಾರೆ. ಆದರೆ, ಇದಕ್ಕೆಲ್ಲ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ಕೆಲವು ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ರಂಗೋಲಿ ಕೆಳಗೆ ತೂರುತ್ತಾರೆ. ಇಂತಹದ್ದೇ ಘಟನೆ ತಮಿಳುನಾಡಿನಲ್ಲಿ ನಡೆಯುತ್ತಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ನಾಯಕ ವೇಲುಮಣಿ ಅವರು ಮತದಾರರಿಗೆ ಆಮೀಷ ಒಡ್ಡಲು ಗೂಗಲ್ ಫೇ, ಫೋನ್​ ಫೇ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿಎಸ್ ಭಾರತಿ ಅವರು ಈ ಗಂಭೀರ ಆರೋಪವನ್ನು ಎಐಎಡಿಎಂಕೆ ನಾಯಕರ ಮೇಲೆ ಮಾಡಿದ್ದಾರೆ.

ವೇಲುಮಣಿ ಅವರು ಮತದಾರರಿಗೆ ಅವರ ಮೊಬೈಲ್ ನಂಬರ್​ಗಳನ್ನು ಪಡೆದು ಗೂಗಲ್ ಫೇ ಫೋನ್ ಪೇ ಮೂಲಕ ಹಣ ನೀಡುತ್ತಿದ್ದಾರೆ. ಈ ಮೂಲಕ ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಈ ಬಗ್ಗೆ ಆರ್​ಬಿಐ ಸಹಾಯ ಪಡೆಯುವುದಾಗಿ ಹೇಳಿದೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ಎಐಎಡಿಎಂಕೆ ನಾಯಕರು ತಳ್ಳಿ ಹಾಕಿದ್ದಾರೆ.

ಒಟ್ಟಿನಲ್ಲಿ ಪಾರದರ್ಶಕವಾಗಿ ನಡೆಯಬೇಕಾಗಿರುವ ಚುನಾವಣೆಯಲ್ಲೂ ಕೆಲವರು ಉನ್ನತ ತಂತ್ರಜ್ಞಾನ ಬಳಸಿ ಮತದಾರರಿಗೆ ಆಮೀಷ ಒಡ್ಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net