ಬೆಂಗಳೂರು: ಬಿಜೆಪಿಯವರ ಷಡ್ಯಂತ್ರ ಏನೇ ಇರಬಹುದು, ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಎಲ್ಲಾ ಉತ್ತರ ಕೊಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನನ್ನೇ ಕರೆಸದೆ, ಕೇಳದೆ ಅದು ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ ಎಂದಿದ್ದಾರೆ.
ಶೇ 90 ರಷ್ಟು ತನಿಖೆ ನಡೆಸಿದ್ದೇವೆ ಎಂದು ಸಿಬಿಐ ಹೇಳಿದೆ. ನಾನು, ನನ್ನ ಹೆಂಡತಿ ಹಾಗೂ ಕುಟುಂಬದವರು ನನ್ನ ಆಸ್ತಿ ಯಾವುದು, ನನ್ನ ಹೆಂಡತಿಯ ಆಸ್ತಿ ಯಾವುದು ಎಂದು ಹೇಳಬೇಕು. ನನ್ನನ್ನೇ ಕರೆಸದೆ, ಕೇಳದೆ ಅದು ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ.
ನಾವು ನ್ಯಾಯಾಲಯಕ್ಕೆ ಸಿಬಿಐ ದಾಖಲಿಸಿರುವ ಎಫ್‌ಐಆರ್ ಸರಿ ಇಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೆವು. ರಾಜಕೀಯ ಉದ್ದೇಶದಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದ ವೇಳೆ ತನಿಖೆಗೆ ಆದೇಶ ನೀಡಿದ್ದರು. ನನಗೆ ನ್ಯಾಯಲಯದ ಬಗ್ಗೆ ಗೌರವ, ನಂಬಿಕೆಯಿದೆ. ಅಗತ್ಯ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತೇನೆ. ಏನೇ ಪ್ರೇರಣೆ ಇರಬಹುದು, ಆದರೆ ನಾನು ಕಾನೂನು ಚೌಕಟ್ಟಿನಲ್ಲೇ ಹೋರಾಟ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ನಾನು ಸಿಎಂ ಹುದ್ದೆ ತೊರೆಯಲು ಸಿದ್ಧ ಆದರೆ…; ವಿರೋಧಿ ಸಚಿನ್ ಪೈಲಟ್ಗೆ ಅಶೋಕ್ ಗೆಹ್ಲೋಟ್ ಪರೋಕ್ಷ ಟಾಂಗ್
ಪ್ರಕರಣದ ಹಿನ್ನೆಲೆ?
ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ನಡೆಸಿದ ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಸಿಬಿಐ ಡಿಕೆಶಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. 2017ರಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆಶಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ದಾಳಿ ನಡೆಸಿತು. ಇದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತು. ಇಡಿ ತನಿಖೆಯ ಬಳಿಕ ಸಿಬಿಐ ಮಧ್ಯಪ್ರವೇಶಿಸಿ ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. 2019ರ ಸೆಪ್ಟೆಂಬರ್ 25ರಂದು ಅಂದಿನ ಸರ್ಕಾರ ತನಿಖೆಗೆ ಅನುಮತಿ ನೀಡಿತು. ಅಂತಿಮವಾಗಿ ಡಿಕೆಶಿ ವಿರುದ್ಧ 2020ರ ಅಕ್ಟೋಬರ್ 3ರಂದು ಎಫ್‌ಐಆರ್ ದಾಖಲಿಸಿತು.
ಸಿಬಿಐ ದಾಖಲಿಸಿರುವ ಈ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ 2022ರ ಜುಲೈನಲ್ಲಿ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಸಿಬಿಐ ತನಿಖೆಗೆ 2023ರ ಫೆ.10ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆ ತೆರವಾದಂತಾಗಿದೆ.