ಸ್ಟಾರ್​ ನಟಿಯ ಜತೆ ನಾಗಚೈತನ್ಯ ಸುತ್ತಾಟ: ಕೊನೆಗೂ ಫೋಟೋ ಸಮೇತ ಸಿಕ್ಕಿಬಿದ್ದ ಸಮಂತಾ ಮಾಜಿ ಪತಿ

samantha
Published on

ಮುಂಬೈ: ಕಳೆದ ವರ್ಷ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ಬ್ರೇಕಪ್​ ಬಹಳ ಸುದ್ದಿ ಮಾಡಿತ್ತು. ಅಭಿಮಾನಿಗಳಿಗೆ ಬಹಳ ಆಘಾತ ತಂದಿದ್ದ ಸುದ್ದಿ ಇದಾಗಿತ್ತು. ಇದಾಗ ಮೇಲೆ ಹಲವಾರು ಬೆಳವಣಿಗೆಗಳು ನಡೆದೇ ಹೋದವು. ಇದೀಗ ಸಮಂತಾ ಮತ್ತು ನಾಗಚೈತನ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ ನಾಗಚೈತನ್ಯ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.

ನಾಗಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಲಾ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ. ಇವರಿಬ್ಬರೂ ಹಲವಾರು ಕಡೆಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿರುವುದು ಕೂಡ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.

ಇದೀಗ ಶೋಬಿತಾ ಅವರು ತಮ್ಮ ಅರಣ್ಯ ಪ್ರವಾಸದ ಸಫಾರಿ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದೇ ರೀತಿ ನಾಗಚೈತನ್ಯ ಕೂಡ ಸಫಾರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ಒಟ್ಟಿಗೆ ಇಲ್ಲದಿದ್ದರೂ ಫೋಟೋಗಳನ್ನು ಹಂಚಿಕೊಂಡಿರುವ ಸ್ಥಳ ಒಂದೇ ಆಗಿರುವುದರಿಂದ ಅಭಿಮಾನಿಗಳ ನಡುವೆ ಬಹಳ ಚರ್ಚೆ ಹುಟ್ಟು ಹಾಕಿದೆ. ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಈ ಜೋಡಿ ಈ ಹಿಂದೆಯು ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದೆ. ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿ ನಾಗಚೈತನ್ಯ ಐಷಾರಾಮಿ ಬಂಗಲೆ ಕಟ್ಟಿಸುತ್ತಿದ್ದಾರೆ. ಶೋಭಿತಾರನ್ನು ಕರೆದುಕೊಂಡು ಹೋಗಿ ನಿರ್ಮಾಣ ಹಂತದಲ್ಲಿರುವ ಮನೆಯ ಟೂರ್ ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಇಬ್ಬರೂ ಒಂದೇ ಕಾರ್​ನಲ್ಲಿ ಅಲ್ಲಿಂದ ಹೊರಟರೆಂದು ಸುದ್ದಿಯಾಗಿದೆ. ‘ಮೇಜರ್’ ಚಿತ್ರದ ಪ್ರಚಾರದ ವೇಳೆ ಹಾಗೂ ಶೋಭಿತಾ ಹುಟ್ಟುಹಬ್ಬದ ಸಮಯದಲ್ಲೂ ನಾಗ್ ಅವರ ಜತೆಯಲ್ಲಿದ್ದರು ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net