ಪ್ರತಿಭೆಗಳಿಗೆ ಅನುಗುಣವಾಗಿ ಮಕ್ಕಳನ್ನು ಬೆಳೆಸಿ: ಅನಿತಾ ಎಚ್.ಬಿ ಸಲಹೆ

Mul_Vyasa Maharshi
Published on

ಮೂಲ್ಕಿ: ಮಕ್ಕಳ ಪ್ರತಿಭೆಗಳಿಗೆ ಅನುಗುಣವಾಗಿ ಪಾಲಕರು ಉತ್ತೇಜನ ನೀಡುವ ಜತೆಗೆ ಕ್ರೀಡೆ, ಶಿಕ್ಷಣ ಸಮಭಾವದೊಂದಿಗೆ ಮಕ್ಕಳನ್ನು ಬೆಳೆಸಿ. ಆದರೆ ಅಂಕಗಳಿಕೆ ಜೀವನದ ಅಭಿವೃದ್ಧಿಯ ಮುಖ್ಯ ಮಾನದಂಡವಲ್ಲ ಎಂದು ತಿಳಿದುಕೊಳ್ಳಬೇಕು ಎಂದು ಮೂಲ್ಕಿ ಪೊಲೀಸ್ ಉಪ ನಿರೀಕ್ಷಕಿ ಅನಿತಾ ಎಚ್.ಬಿ ಹೇಳಿದರು.

ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ಪ್ರಯುಕ್ತ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಇಂದು ಸೈಬರ್ ಕ್ರೈಮ್ ಅತೀ ಹೆಚ್ಚಾಗಿದ್ದು, ಶೀಘ್ರ ಹಣ ಗಳಿಸುವ ಆಮಿಷ, ಪೊಲೀಸ್ ಆರೆಸ್ಟ್, ಯಾವುದೇ ಗ್ರೀಟಿಂಗ್ ಕಾರ್ಡ್ ಡೌನ್‌ಲೋಡ್ ಮುಂತಾದ ವಿಷಯಗಳಲ್ಲಿ ಹಣ ಲಪಟಾಯಿಸುವ ತಂಡಗಳು ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಜಾಗ್ರತೆ ವಹಿಸುವ ಜತೆಗೆ ಪೊಲೀಸರ ಹೆಸರಿನಲ್ಲಿ ಕರೆ ಬಂದರೆ ಸಮೀಪದ ಠಾಣೆ ಸಂಪರ್ಕಿಸುವುದು ಅಥವಾ 102ಗೆ ಕರೆ ಮಾಡಬೇಕು ಎಂದರು.

ಶಾಲೆ ಹಳೇ ವಿದ್ಯಾರ್ಥಿನಿ ಡಾ.ಅನನ್ಯ ಎ.ಕೆ. ಮಾತನಾಡಿ, ಶಿಕ್ಷಕರ ಮಾರ್ಗದರ್ಶನ, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ತಿಳಿವಳಿಕೆ ನೀಡಿದ ಕಾರಣ ನಾಯಕತ್ವದ ಗುಣಗಳ ಬುನಾದಿ ಈ ಶಾಲೆಯಿಂದ ಲಭ್ಯವಾಗಿದೆ ಎಂದರು.

ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಕಾರ್ಯದರ್ಶಿ ಎಚ್.ರಾಮದಾಸ ಕಾಮತ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಶಾಲಾ ಆಡಳಿತ ಮಂಡಳಿ ಸಂಚಾಲಕ ಪಾಂಡುರಂಗ ಭಟ್, ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ, ಪ್ರಾಂಶುಪಾಲೆ ಕಾಮಾಕ್ಷಿ ಆರ್.ನಾಯಕ್ ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಮುಕ್ತ ಸ್ವಾಗತಿಸಿದರು. ಕಾಮಾಕ್ಷಿ ಆರ್.ನಾಯಕ್ ವರದಿ ಮಂಡಿಸಿದರು. ಶಿಕ್ಷಕಿಯರಾದ ದೇವಿಕಾ, ನಿಶಾ ಕಾಮತ್ ನಿರೂಪಿಸಿದರು. ಜಯಶ್ರೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net