

ಉಳ್ಳಾಲ: ನಾಟೆಕಲ್‌ನಲ್ಲಿರುವ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಸ್ಥಳೀಯ ನಂಬರ್‌ನಿಂದ ಬಂದ ಕರೆಯನ್ನಾಧರಿಸಿ ತಜ್ಞರ ತಂಡ ತಪಾಸಣೆ ನಡೆಸಿದಾಗ ಹುಸಿ ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ.
ಬುಧವಾರ ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆ ಹೆರಿಗೆ ವಿಭಾಗದ ಸ್ಥಿರ ದೂರವಾಣಿಗೆ ಬಂದ ಕರೆಯನ್ನು ಪಿಜಿ ವಿದ್ಯಾರ್ಥಿನಿ ಸ್ವೀಕರಿಸಿದ್ದರು. ಈ ಸಂದರ್ಭ ಕರೆ ಮಾಡಿದಾತ ಆಂಗ್ಲ ಭಾಷೆಯಲ್ಲಿ ಮಾತನಾಡಿ, ಇಂದು ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಬಾಂಬ್ ಸ್ಪೋಟಿಸುತ್ತೇನೆ. ಎಲ್ಲರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ನಾಲ್ಕೈದು ಬಾರಿ ಕರೆ ಬಂದಿದ್ದು ಬ್ಯಾರಿ ಭಾಷೆಯಲ್ಲೂ ಬೆದರಿಕೆ ಹಾಕಿದ್ದ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನಲ್ಲಿ ಪರಿಶೀಲನೆ ನಡೆಸಿದಾಗ ಏನೂ ಸಿಕ್ಕಿಲ್ಲ. ಇದರಿಂದಾಗಿ ಇದೊಂದು ಹುಸಿ ಬಾಂಬ್ ಕರೆ ಎನ್ನುವುದು ಗೊತ್ತಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೊಬೈಲ್ ನಂಬರ್ ಪರಿಶೀಲಿಸುತ್ತಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ತಮಾಷೆಗೆ ಕರೆ ಮಾಡಿದರೇ?: ಆಸ್ಪತ್ರೆಯ ಸ್ಥಿರ ದೂರವಾಣಿಗೆ ಕರೆ ಮಾಡಿದಾತ ಮೊದಲು ಆಂಗ್ಲಭಾಷೆಯಲ್ಲಿ ಮಾತನಾಡಿದ್ದ, ಬಳಿಕ ನಾಲ್ಕೈದು ಬಾರಿ ಕರೆ ಮಾಡಿ ಬ್ಯಾರಿ ಭಾಷೆಯಲ್ಲೂ ಮಾತನಾಡಿದ್ದ ಎಂದು ಹೇಳಲಾಗಿದೆ. ಇದನ್ನು ಗಮನಿಸಿದಾಗ ಮೋಜಿಗಾಗಿ ಕರೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಕೆಲ ವರ್ಷಗಳ ಹಿಂದೆ ಮಂಗಳೂರಿನ ಐಟಿ ಕಂಪನಿಗೆ ಇದೇ ರೀತಿ ಕರೆ ಬಂದಿತ್ತು. ಕರೆ ಸ್ವೀಕರಿಸಿದ ಮಹಿಳೆ ಹಿಂದಿ ಭಾಷಿಕರಾಗಿದ್ದರೆ, ಕರೆ ಮಾಡಿದ್ದವರು ತಮಿಳು ಭಾಷಿಕರಾಗಿದ್ದರು. ಕರೆ ಮಾಡಿದ್ದವರು ಬಾಂಬೆ ಎಂದು ಹೇಳಿದ್ದು ಕರೆ ಸ್ವೀಕರಿಸಿದ ಮಹಿಳೆ ಅದನ್ನೇ ತಪ್ಪಾಗಿ ಅರ್ಥೈಸಿ ಬಾಂಬ್ ಇದೆ ಎಂದು ತಿಳಿಸಿ ಅವಾಂತರ ಸೃಷ್ಟಿಸಿದ್ದರು. ಇಲ್ಲಿಯೂ ಅಂಥದ್ದೇ ತಪ್ಪು ನಡೆದಿದೆ ಎನ್ನಬಹುದಾದರೂ ವಿದ್ಯಾರ್ಥಿನಿ ಆಂಗ್ಲ ಭಾಷೆ ಬಲ್ಲವಳಾಗಿದ್ದರಿಂದ ತಮಾಷೆಗಾಗಿ ಸಹಪಾಠಿಗಳೇ ಕರೆ ಮಾಡಿರುವ ಅನುಮಾನವೂ ಇದೆ.