ಗೌರವ, ಪ್ರೀತಿಗೆ ಬದ್ಧವಾದ ಸಮಾಜ ನಿರ್ಮಾಣ: ಪ್ರೊ.ವಿವೇಕ್ ರೈ ಪ್ರತಿಪಾದನೆ: ಪಂಪ ಪ್ರಶಸ್ತಿ ಹಿನ್ನೆಲೆ ಮಂಗಳೂರು ವಿವಿಯಲ್ಲಿ ಅಭಿವಂದನೆ

New Project (25)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು, ಬೆಂಕಿ ಹಚ್ಚುವುದು ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆಯನ್ನು ದಾಟಿಸಬಲ್ಲ ಶಕ್ತಿಯಿದೆ. ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜ ಕಟ್ಟೋಣ ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರು ವಿವಿಯಲ್ಲಿ ಅಭಿವಂದನೆ ಸ್ವೀಕರಿಸಿ ಮಾತನಾಡಿದರು.

ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕೇ ಹೊರತು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಸಾಹಿತ್ಯದ ಓದು ನನಗೆ ಬದುಕಿನ ಪ್ರಾಮಾಣಿಕತೆಯನ್ನು ಕಲಿಸಿದೆ. ಕುಲಪತಿಯಾದ ಬಳಿಕ ಮೂಡಾದಿಂದ ಸೈಟಿನ ಕೊಡುಗೆ ಬಂದಿತ್ತು. ಅಧಿಕಾರಿಗಳು ತಕೊಳ್ಳಿ ಸರ್ ಮುಂದೆ ಮಾರಬಹುದು ಎಂದರೂ, ನನಗೆ ಸರಿ ಕಾಣದ ಕಾರಣ ನಿರಾಕರಿಸಿದೆ ಎಂದರು.

ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ ಅಭಿನಂದನಾ ಭಾಷಣದಲ್ಲಿ, ಕನ್ನಡದ ಕೆಲಸಗಳ ತೀವ್ರತೆ ಈಗ ಕಡಿಮೆಯಾಗಿದೆ. ಕನ್ನಡ ಮುರಿಯುವ ಕೆಲಸದ ಬದಲು ಕನ್ನಡವನ್ನು ಕಟ್ಟುವ ಕೆಲಸ ನಮ್ಮಿಂದ ಆಗಬೇಕಿದೆ. ಎಲ್ಲ ಕನ್ನಡದ ಮನಸುಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಕನ್ನಡ ಬೆಳೆಯಬಹುದು ಎಂಬ ನಿಷ್ಠೆಯೊಂದಿಗೆ ವಿವೇಕ್ ರೈ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡ ವಿದ್ವಾಂಸರಾಗಿದ್ದಾರೆ ಎಂದು ತಿಳಿಸಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಅಭಯ್ ಕುಮಾರ್, ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ, ಡಾ.ಶಾನಿ ಕೆ.ಆರ್, ಪ್ರೊ.ವಿವೇಕ್ ರೈ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಧನಂಜಯ ಕುಂಬ್ಳೆ ವಂದಿಸಿದರು. ಉಪನ್ಯಾಸಕ ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ದ.ಕ. ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯ ಅಪಾರ ಜ್ಞಾನದೊಂದಿಗೆ ಮನಸುಗಳನ್ನು ಜೋಡಿಸುವ ಕಾರ್ಯ ಮಾಡಿರುವ ಪ್ರೊ.ವಿವೇಕ್ ರೈ, ಮಂಗಳೂರು ಕ್ಯಾಂಪಸ್‌ನಲ್ಲಿ ಹೊಸ ರೀತಿಯ ಶೈಕ್ಷಣಿಕ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ. ಅವರು ಕಟ್ಟಿಕೊಟ್ಟಿರುವ ಪರಂಪರೆಯನ್ನು ಮುನ್ನಡೆಸಲಿದ್ದೇವೆ. ಪ್ರೊ.ಪಿ.ಎಲ್.ಧರ್ಮ ಕುಲಪತಿ, ಮಂಗಳೂರು ವಿವಿ https://www.vijayavani.net/lottery-welfare-fund-meeting-scholarship-distribution https://www.vijayavani.net/indira-canteen-4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net