

ತುಮಕೂರು: 'ಯುವರತ್ನ' ಸಿನಿಮಾ ಪ್ರಮೋಷನ್‌ಗಾಗಿ ಸೋಮವಾರ ಕಲ್ಪತರು ನಾಡು ತುಮಕೂರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ‘ಪವರ್‌ಫುಲ್’ ಸ್ವಾಗತ ಸಿಕ್ಕಿತು. ಸಂಜೆ 4.30ರಿಂದಲೇ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಪುನೀತ್ ರಾಜಕುಮಾರ್, ‘ತುಮಕೂರು ನನ್ನ ಹೃದಯಕ್ಕೆ ಹತ್ತಿರ’ ಇದೆ ಎನ್ನುತ್ತಿದ್ದಂತೆ 2 ಗಂಟೆಗೂ ಹೆಚ್ಚು ಕಾಲ ನಿಂತು ಬಸವಳಿದಿದ್ದ ಕನ್ನಡ ಚಿತ್ರರಸಿಕರ, ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತು.
ನಗರದ ಎಸ್‌ಐಟಿ ಕ್ರೀಡಾಂಗಣಕ್ಕೆ ಸೋಮವಾರ ಸಂಜೆ 6.30ಕ್ಕೆ ಪುನೀತ್ ಕಾಲಿಡುತ್ತಿದ್ದಂತೆ ಅಲ್ಲಿ ನೆರದಿದ್ದವರಲ್ಲಿ ಮಿಂಚಿನ ಸಂಚಾರ. ನನ್ನ ಮೊದಲ ಚಿತ್ರ 'ಅಪ್ಪು' ಬಿಡುಗಡೆಯಾಗಿ 4 ವಾರ ಉತ್ತಮ ಪ್ರದರ್ಶನ ಕಂಡವೇಳೆ ಮೊದಲಿಗೆ ಭೇಟಿ ನೀಡಿದ್ದು ತುಮಕೂರಿಗೆ. ಅಂದು ಆನೆ ಮೇಲೆ ಮೆರವಣಿಗೆ ಮಾಡಿಸಿದ್ದರು. ನಂತರ ಹಲವು ಚಿತ್ರಗಳು ತೆರೆಕಂಡಾಗ ತುಮಕೂರಿಗೆ ಭೇಟಿ ನೀಡಿದ್ದೆ. ಇತ್ತೀಚೆಗೆ 'ನಟಸಾರ್ವಭೌಮ' ಬಿಡುಗಡೆ ಸಂದರ್ಭದಲ್ಲೂ ಬಂದಿದ್ದಾಗ ಆನೆಯಿಂದ ಹಾರ ಹಾಕಿಸಿದ್ದರು ಎಂದು ನೆನಸಿಕೊಂಡ ಪುನೀತ್ ನನಗೆ ಯಾವತ್ತಿದ್ದರೂ ತುಮಕೂರು ಹೃದಯಕ್ಕೆ ಹತ್ತಿರ ಎಂದರು. ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್, ಡಾ.ರಾಜ್‌ಸೇನೆ ಸಮಿತಿ ಜಿಲ್ಲಾಧ್ಯಕ್ಷ ಶಿವರಾಜ್, ಅಪ್ಪು ಯೂತ್ ಬ್ರಿಗೇಡ್ ಅಧ್ಯಕ್ಷ ದೀಕ್ಷಿತ್, ವೈ.ಅಮಿತ್ ಮತ್ತಿತರರು ಇದ್ದರು.
ರಾಜಕೀಯ ಯಾಕೆ ಬೇಕು?: ರಾಜಕೀಯನಾ? ರಾಜಕೀಯ ಯಾಕೆ ಬೇಕು. ಇಷ್ಟೊಂದು ಜನರ ಪ್ರೀತಿ-ವಿಶ್ವಾಸ ಇದೆ. ಹೀಗೆ ಅಪಾರ ಪ್ರಮಾಣದ ಜನ ಪ್ರೀತಿ-ವಿಶ್ವಾಸ ತೋರಿಸುತ್ತಿರುವಾಗ ರಾಜಕೀಯ ಯಾಕ್ರೀ ಬೇಕು ಎಂದು ನಟ ಪುನೀತ್ ರಾಜಕುಮಾರ್ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
'ಯುವರತ್ನ' ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಸಿದ್ದಗಂಗಾಮಠಕ್ಕೆ ನಟ ಪುನೀತ್ ರಾಜಕುಮಾರ್ ಹಾಗೂ ಚಿತ್ರತಂಡ ಭೇಟಿ ನೀಡಿದ್ದು ಈ ವೇಳೆ ಶ್ರೀಮಠದ ಅಂಗಳದಲ್ಲಿ ಸಂಜೆಯ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ನೇರವಾಗಿ ಶಿವಕುಮಾರಶ್ರೀಗಳ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಠದ ಮಕ್ಕಳ ಜತೆ ಪ್ರಾರ್ಥನೆಯಲ್ಲಿ ಪುನೀತ್ ಭಾಗಿಯಾದರು. ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ಜತೆ ವೇದಿಕೆಯನ್ನು ಪುನೀತ್ ಹಂಚಿಕೊಂಡರು. ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದ ವಿದ್ಯಾರ್ಥಿ ಶ್ರೀಮಠದವನು. ಇವತ್ತು ಶ್ರೀಮಠಕ್ಕೆ ಭೇಟಿ ನೀಡಿ ನಿಮ್ಮನ್ನೆಲ್ಲ ನೋಡಿದ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ. ಶಿವಕುಮಾರ ಶ್ರೀಗಳನ್ನು ಮೂರ‌್ನಾಲ್ಕು ಬಾರಿ ಹತ್ತಿರದಿಂದ ಕಂಡಿದ್ದು ಅವರ ಆಶೀರ್ವಾದ ನಮ್ಮೊಂದಿಗೆ ಇರುತ್ತದೆ ಎಂದು ಪುನೀತ್ ಹೇಳಿದರು.