

ಚಿಕ್ಕಬಳ್ಳಾಪುರ: ನೀರಿನಲ್ಲಿ ಈಜು-ಮೋಜು ಪ್ರಾಣಕ್ಕೆ ಕಂಟಕವಾದ ಅನೇಕ ಪ್ರಕರಣಗಳಿವೆ. ಅಂಥದ್ದೇ ಮತ್ತೊಂದು ಪ್ರಕರಣ ಇಂದು ವರದಿಯಾಗಿದ್ದು, ಸವಾಲು ಹಾಕಿ ಈಜಲು ಹೋದವ ವಾಪಸ್ ಬರಲೇ ಇಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಸಂತೋಷ್ ಎಂಬ 24 ವರ್ಷದ ಯುವಕ ಇದರಲ್ಲಿ ಮೃತಪಟ್ಟಿದ್ದಾನೆ. ಗೆಳೆಯರಾದ ವಿಜಯ್ ಹಾಗೂ ಪವನ್ ಜೊತೆ ಈತ ಈಜಲು ಹೋಗಿದ್ದಾಗ ಅವಘಡ ಉಂಟಾಗಿದೆ.
ಸ್ನೇಹಿತರೊಂದಿಗೆ ಸವಾಲು ಹಾಕಿದ್ದ ಸಂತೋಷ್, ಮಳೆ ಬಂದು ತುಂಬಿದ್ದ ಕೆರೆಯಲ್ಲಿ ಈಜಲು ಧುಮುಕಿದ್ದಾನೆ. ಪೈಪೋಟಿಗೆ ಬಿದ್ದು ಈಜುತ್ತಿದ್ದಾಗ ಸಂತೋಷ್ ಮುಳುಗಿ ಮೃತಪಟ್ಟಿದ್ದಾನೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.