

ಬೆಂಗಳೂರು: ಕನ್ನಡ ನಾಡು, ನುಡಿಯ ಕುರಿತು ಜನರು ವಿಭಿನ್ನ ರೀತಿಯಲ್ಲಿ ಸ್ಪಂದನೆ ಮಾಡುತ್ತಿರುತ್ತಾರೆ. ಈ ನಡುವೆ ಚಿಕ್ಕಬಳ್ಳಾಪುರದ ಕೋಚಿಮುಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಯುವಕ ಮಂಜುನಾಥ ಭದ್ರಶೆಟ್ಟಿ, ಸದಾ ಎಂಇಎಸ್ ಪುಂಡರು ಕನ್ನಡದ ವಿರುದ್ಧ ಕಿತಾಪತಿ ಮಾಡುವ ಬೆಳಗಾವಿಯಲ್ಲಿ ನಾಡದೇವಿ ಭುವನೇಶ್ವರಿಯ ದೇವಸ್ಥಾನ ಮಾಡುವ ಸಂಕಲ್ಪದೊಂದಿಗೆ ಯಾತ್ರೆ ಹೊರಟಿದ್ದಾರೆ.
ಈ ಹಿಂದೆ ಕನ್ನಡಕ್ಕಾಗಿ ಬೆಳಗಾವಿಗೆ ಕನ್ನಡದ ಧ್ವಜಗಳೊಂದಿಗೆ ಪಾದಯಾತ್ರೆಯನ್ನು ಮಂಜುನಾಥ್ ನಡೆಸಿದ್ದರು. ನಡುವೆ ಸಿಕ್ಕಿದ ಕೆಲವು ಕಿಡಿಗೇಡಿಗಳು, ತಾವು ನಿಪ್ಪಾಣಿಯವರು ಎಂದು ಹೇಳಿಕೊಂಡಿದ್ದಾರೆ. ಯಾವುದೇ ಕಾರಣಕ್ಕೆ ಕನ್ನಡದ ಧ್ವಜ ಬೆಳಗಾವಿಯಲ್ಲಿ ಹಾರಿಸಲು ಬಿಡುವುದಿಲ್ಲ. ಕನ್ನಡಿಗರು ಅಲ್ಲಿ ನೆಲೆ ನಿಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳಿ ಕನ್ನಡ ಧ್ವಜಕ್ಕೆ ಬೆಂಕಿ ಹೆಚ್ಚಿ, ಜೀವ ಬೆದರಿಕೆಯನ್ನೂ ಒಡ್ಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿರುವ ಮಂಜುನಾಥ್, ಬೆಳಗಾವಿಯಲ್ಲಿ ಭುವನೇಶ್ವರಿ ದೇವಾಲಯ ನಿರ್ವಣಕ್ಕೆ ಮುಂದಾಗಿದ್ದಾರೆ.
ಸುಂದರ ವಿಗ್ರಹ: ಬೆಳಗಾವಿಯಲ್ಲಿ ದೇವಸ್ಥಾನ ನಿರ್ವಣಕ್ಕೆ ಮುಖ್ಯವಾಗಿ ಭುವನೇಶ್ವರಿಯ ವಿಗ್ರಹ ಬೇಕಾಗಿತ್ತು. ಯುವಕನ ಆಸೆಗೆ ಪೂರಕವಾಗಿ ಕೋಚಿಮುಲ್ನ ನಿರ್ದೇಶಕ ಮಂಡಳಿ ಸದಸ್ಯರೊಬ್ಬರು ಸುಮಾರು ಎರಡು ಅಡಿ ಎತ್ತರದ ಕಪು್ಪ ಕಲ್ಲಿನ ಸುಂದರವಾದ ಭುವನೇಶ್ವರಿ ವಿಗ್ರಹವನ್ನು ತಯಾರಿಸಿಕೊಟ್ಟಿದ್ದಾರೆ. ವಿಗ್ರಹವನ್ನು ಹೊತ್ತೊಯ್ಯಲು ಕೋಚಿಮುಲ್ನ ಅನೇಕ ಸಿಬ್ಬಂದಿ ಸೇರಿ ಒಂದು ದ್ವಿಚಕ್ರ ವಾಹನ ನೀಡಿದ್ದಾರೆ. ವಾಹನದ ಹಿಂಭಾಗದಲ್ಲಿ ವಿಗ್ರಹವನ್ನು ಕಟ್ಟಿಕೊಂಡ ಯುವಕ ಮಂಗಳವಾರ ಬೆಳಗಾವಿಯತ್ತ ಪ್ರಯಾಣ ಆರಂಭಿಸಿದ್ದಾರೆ.
ವಿಗ್ರಹದ ಬಳಿಯಲ್ಲೇ ವಾಸ್ತವ್ಯ: ಸುಮಾರು 7-8 ದಿನದಲ್ಲಿ ಬೆಳಗಾವಿ ತಲುಪುವ ಉದ್ದೇಶ ಹೊಂದಿರುವ ಮಂಜುನಾಥ್, ನಡುವೆ ವಾಸ್ತವ್ಯಕ್ಕೆ ಹೋಟೆಲ್ ರೂಮ್ ಮಾಡುವುದಿಲ್ಲ ಎನ್ನುತ್ತಾರೆ. ನಾನು ಹೋಟೆಲ್ ರೂಮ್ಲ್ಲಿ ಮಲಗಿದರೆ, ವಿಗ್ರಹವನ್ನು ಒಂಟಿಯಾಗಿ ಹೊರಗೆ ಬಿಡಬೇಕಾಗುತ್ತದೆ. ಹಾಗಾಗಿ ವಾಹನ ಎಲ್ಲಿ ನಿಂತಿರುತ್ತದೆಯೋ ಅದರ ಬಳಿಯಲ್ಲೆ, ಬಯಲಲ್ಲೆ ನಿದ್ರಿಸುತ್ತೇನೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಟೌನ್ಹಾಲ್ ಬಳಿಯಲ್ಲೆ ಮಲಗಲು ಪೊಲೀಸರು ಸಹಾಯ ಮಾಡಿದರು. ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಮೆಯನ್ನಿರಿಸಿ ಅಲ್ಲಿಯೇ ಉಳಿಯುತ್ತೇನೆ. ಕೆಲ ದಾನಿಗಳು ದಾನಿಗಳು ಈಗಾಗಲೆ ಹಣ ನೀಡುತ್ತಿದ್ದಾರೆ. ಮತ್ತಷ್ಟು ದಾನಿಗಳಿಂದ ಹಣ ಸಂಗ್ರಹಿಸಲಾಗುತ್ತದೆ. ಸರ್ಕಾರ ಭೂಮಿ ನೀಡಿದ ಕೂಡಲೆ ದೇವಾಲಯ ನಿರ್ವಿುಸಿದ ನಂತರವೇ ನಾನು ವಾಪಸಾಗುವ ಸಂಕಲ್ಪ ಮಾಡಿದ್ದೇನೆ ಎನ್ನುತ್ತಾರೆ ಮಂಜುನಾಥ್ ಭದ್ರಶೆಟ್ಟಿ.