

ಅಥಣಿ: ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರಾಮಪ್ಪ ಹೋಸಲ್ಕಾರ (31) ಎಂದು ಗುರುತಿಸಲಾಗಿದ್ದು, ಇವರ ಮದುವೆಯೂ ಸೆಪ್ಟೆಂಬರ್ 05ರಂದು ನಿಶ್ಚಯಿಸಲಾಗಿತ್ತು.
ಮಂಗಳವಾರ ರಾತ್ರಿ (ಸೆಪ್ಟೆಂಬರ್ 03) ಎಂಟು ಗಂಟೆ ಆಸುಪಾಸಿನಲ್ಲಿ ಮನೆ ಮುಂದೆ ಮದುವೆ ಪೂರ್ವ ಸಿದ್ಧತೆ ಮಾಡುವಾಗ ದೂರವಾಣಿಯಲ್ಲಿ ಮಾತನಾಡುವ ವೇಳೆ ತೀವ್ರ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಐಗಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೊಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.