

ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಫ್ಲ್ಯಾಟ್ನಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿದ್ದು, ಸ್ನಾನದ ಕೋಣೆಯಲ್ಲಿ ಶವ ಅನುಮಾನಾಸ್ಪದವಾಗಿ ಕಂಡುಬಂದಿದೆ. ಬೆಂಗಳೂರಿನ ಬೆಳ್ಳಂದೂರಿನ ಫ್ಲ್ಯಾಟ್ವೊಂದರಲ್ಲಿ ಈ ಪ್ರಕರಣ ನಡೆದಿದೆ.
ಯುವತಿ ಕವಿತಾ (19) ಮೃತಪಟ್ಟವಳು. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ವಿವೇಕ್ ಎಂಬವರ ಮನೆಯಲ್ಲಿ ಈ ಯುವತಿ ಮಗುವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು.
ಇಂದು ಬೆಳಗ್ಗೆ ಫ್ಲ್ಯಾಟ್ನ ಸ್ನಾನದ ಕೋಣೆಯಲ್ಲಿ ಯುವತಿಯ ಶವ ಕಂಡುಬಂದಿದೆ. ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ವಿವೇಕ್ ಪೊಲೀಸರಿಗೆ ತಿಳಿಸಿದ್ದಾರೆ.
ಬೆಳ್ಳಂದೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವತಿ ಕವಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿಯ ಅನುಮಾನಾಸ್ಪದ ಸಾವಿನ ಹಿನ್ನಲೆಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.