ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮದ ಪುಳಕ : ಸುರೇಶ್ ಶೆಟ್ಟಿ ಮಾಹಿತಿ : ಅರುವ ಕೊರಗಪ್ಪ ಶೆಟ್ಟಿಯವರಿಗೆ ಪ್ರಶಸ್ತಿ ಪ್ರದಾನ

Bdk_Yakshagana
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಯಕ್ಷಧ್ರುವ ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕದ ವತಿಯಿಂದ ಯಕ್ಷ ಸಂಭ್ರಮ ಡಿ.14ರಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ತಿಳಿಸಿದರು.

ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಪಟ್ಲ ಫೌಂಡೇಷನ್ ಮಹಾಪೋಷಕರಾದ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಮಾರ್ಗದರ್ಶನದಂತೆ ಕಳೆದ ಎರಡು ವರ್ಷಗಳಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ ಯಶಸ್ವಿಯಾಗಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಮೂರನೇ ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೆಳಗ್ಗೆ 11.30ಕ್ಕೆ ತಹಸೀಲ್ದಾರ್ ಪೃಥ್ವಿ ಸಾನಿಕಂ ಉದ್ಘಾಟಿಸಲಿದ್ದು, ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಲಕ್ಷ್ಮೀ ಗ್ರೂಪ್ ಉಜಿರೆ ಮಾಲಕ ಮೋಹನ್ ಕುಮಾರ್ ಹಾಗೂ ಯಕ್ಷಧ್ರುವ ಯಕ್ಷಶಿಕ್ಷಣ ಮಂಗಳೂರು ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಭಾಗವಹಿಸಲಿದ್ದಾರೆ.

ತಾಲೂಕಿನ 8 ಶಾಲೆಗಳ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 5.30ರಿಂದ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಭಜನಾ ತಂಡಗಳು, ತಾಲೀಮು ತಂಡ, ಚೆಂಡೆ-ವಾದ್ಯಗಳ ಭವ್ಯ ಮೆರವಣಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಸಂಜೆ 7.30ಕ್ಕೆ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ ಸಂಭ್ರಮ-2024 ಪ್ರಶಸ್ತಿ ಪ್ರದಾನಿಸಲಾಗುವುದು.

ಹಿರಿಯ ವೈದ್ಯರಾದ ಗುರುವಾಯನಕೆರೆಯ ಡಾ.ವೇಣುಗೋಪಾಲ ಶರ್ಮ, ಬೆಳ್ತಂಗಡಿಯ ಡಾ.ಕೆ.ಜಿ. ಪಣಿಕರ್ ಅವರಿಗೆ ಗೌರವ ಸನ್ಮಾನ ಹಾಗೂ ಸಾಧಕರಾದ ನಿಡ್ಲೆಯ ಅಗ್ರೀಲಿಫ್ ಸಂಸ್ಥೆಯ ಅವಿನಾಶ್ ರಾವ್ ಮತ್ತು ಅತಿಶಯ ಜೈನ್‌ಗೆ ಸನ್ಮಾನ ನಡೆಯಲಿದೆ. ಚಲನಚಿತ್ರ ನಟ-ನಟಿಯರು, ಕಿರುತೆರೆ , ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ರಘುರಾಮ ಶೆಟ್ಟಿ ಉಜಿರೆ, ವಸಂತ ಶೆಟ್ಟಿ, ಕಿರಣ್ ಕುಮಾರ್, ತುಕರಾಮ್ ಉಪಸ್ಥಿತರಿದ್ದರು.

ಬಂಗಾರ ಗೆಲ್ಲುವ ಅವಕಾಶ

ಯಕ್ಷಗಾನ ಕಲಾಪ್ರೇಮಿಗಳಿಗೆ ಯಕ್ಷ ಸಂಭ್ರಮದಲ್ಲಿ ವಿಶೇಷ ಕೊಡುಗೆಗಳನ್ನು ಪಡೆಯುವ ಅವಕಾಶ ಇದೆ. ಕೊನೆಯ ತನಕ ಯಕ್ಷಗಾನ ವೀಕ್ಷಿಸಿದವರಿಗೆ ಚಿನ್ನ ಗೆಲ್ಲುವ ಅವಕಾಶವಿದೆ. ಅದೃಷ್ಟ ಚೀಟಿ ಮೂಲಕ ಓರ್ವ ಯಕ್ಷಪ್ರೇಮಿಯನ್ನು ಬಹುಮಾನಕ್ಕಾಗಿ ಆರಿಸಲಾಗುವುದು.

ಖಾದ್ಯ ವೈವಿಧ್ಯ, ಉಚಿತ ವಿಮಾನ ಪ್ರಯಾಣ

ಯಕ್ಷಗಾನದ ಪ್ರಯುಕ್ತ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು, ಎಲ್ಲ ಖಾದ್ಯಗಳ ಹೆಸರು ಹೇಳಿದ ಯಕ್ಷಪ್ರೇಮಿಗೆ ಅದೃಷ್ಟ ಬಹುಮಾನ ಇದೆ. ಕೊನೆಯ ತನಕ ಯಕ್ಷಗಾನ ವೀಕ್ಷಿಸಿದ ಓರ್ವ ಯಕ್ಷಪ್ರೇಮಿಗೆ ಯಕ್ಷಗಾನದ ಸಾರಥ್ಯ ವಹಿಸಿದ ಶಶಿಧರ ಶೆಟ್ಟಿ ಬರೋಡ ಇವರೊಂದಿಗೆ ಬೆಂಗಳೂರಿಗೆ ಉಚಿತ ವಿಮಾನ ಪ್ರಯಾಣ ಮಾಡುವ ಅವಕಾಶ ಸಿಗಲಿದೆ. ಯಕ್ಷ ಸಂಭ್ರಮದಲ್ಲಿ ಕೊನೇ ತನಕ ಭಾಗವಹಿಸಿದ ಅದೃಷ್ಟಶಾಲಿ ಒಂದು ಕುಟುಂಬಕ್ಕೆ ಉಜಿರೆ ದಿ ಓಶಿಯನ್ ಪರ್ಲ್ ಹೋಟೆಲಿನ ಅತಿ ಗಣ್ಯರು ತಂಗುವ ರೂಂನಲ್ಲಿ ಒಂದು ದಿನ ಉಚಿತವಾಗಿ ತಂಗುವ ಭಾಗ್ಯ ಸಿಗಲಿದೆ. ಯಕ್ಷಗಾನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಏಳು ಸರ್ಕಾರಿ ಶಾಲೆ, ಒಂದು ಪ್ರೌಢಶಾಲೆಯ ಸುಮಾರು 500 ವಿದ್ಯಾರ್ಥಿಗಳಿಗೆ ನುರಿತ ಯಕ್ಷಗಾನ ಗುರುಗಳಿಂದ ಯಕ್ಷಗಾನ ತರಬೇತಿ ನೀಡುತ್ತಿದ್ದು, 14ರಂದು ರಂಗ ಪ್ರವೇಶ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net