

H S Venkateshamurthy : ಇಂದು (ಮೇ 30) ಬೆಳಗ್ಗೆ ಇಹಲೋಕ ತ್ಯಜಿಸಿದ ಕನ್ನಡದ ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶ್ಮೂರ್ತಿ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ನುಡಿ ನಮನ ಸಲ್ಲಿಸಿದ್ದಾರೆ.
ಎಚ್.ಎಸ್.ವೆಂಕಟೇಶಮೂರ್ತಿ ಅಂದರೆ ಕನ್ನಡಿಗರಿಗೆ ಬಹಳ ಪ್ರೀತಿ. ಅವರ ಕವಿತೆಗಳೆಲ್ಲ ಹಾಡುಗಳಾಗಿ ಕನ್ನಡಿಗರ ಮನೆ ಮನೆ ತಲುಪಿದ್ದು ನಮಗೆ ಗೊತ್ತೇ ಇದೆ. ಯಾವುದೇ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ವೆಂಕಟೇಶಮೂರ್ತಿಯವರ ಕವಿತೆಗಳನ್ನು ಹಾಡದಿದ್ದರೆ ಕಲಾವಿದರಿಗೂ ಸಮಾಧಾನ ಇಲ್ಲ. ಪೌರಾಣಿಕ ಪ್ರತಿಮೆಗಳನ್ನು ಆಧುನಿಕತೆಗೆ ಒಗ್ಗಿಸಿ ಬರೆಯುವ ಅವರ ಶೈಲಿ ಮೋಹಕವಾದುದು. ಈ ವಿಷಯದಲ್ಲಿ "ನಾನು ನಿಸಾರ್ ಅಹಮದ್ ಅವರಿಂದ ಪ್ರೇರಣೆ ಪಡೆದೆ" ಎಂದು ಅವರು ಹೇಳುತ್ತಿದ್ದರು.
ವೆಂಟೇಶಮೂರ್ತಿಯವರ ಬರಹದ ವಿಸ್ತಾರ ದೊಡ್ಡದು. ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಹಳಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. 'ಕನ್ನಡದಲ್ಲಿ ಕಥನ ಕವನಗಳು' ಅವರಿಗೆ ಡಾಕ್ಟರೇಟ್ ಪದವಿ ತಂದುಕೊಟ್ಟ ಮಹಾಪ್ರಬಂಧ. ಅವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಅನೇಕರಿಗೆ ಕನ್ನಡದಲ್ಲಿ ಬರೆಯಲು ಪ್ರೇರಣೆ ನೀಡಿದರು.
ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ಎಲೆಗಳು ನೂರಾರು, ಭೂಮಿಯೂ ಒಂದು ಆಕಾಶ, ಮೊದಲಾದುವು ಅವರ ಪ್ರಮುಖ ಕವನ ಸಂಕಲನಗಳು. ಬಾಣಸವಾಡಿಯ ಬೆಂಕಿ ಮತ್ತು ಪುಟ್ಟಾರಿಯ ಮತಾಂತರ ಕಥ ಸಂಕಲನಗಳು. ತಾಪಿ, ಅಮಾನುಷರು, ಕದಿರನ ಕೋಟೆ ಮತ್ತು ಅಗ್ನಿಮುಖಿ ಅವರ ಜನಪ್ರಿಯ ಕಾದಂಬರಿಗಳು. ನೂರು ಮರ, ನೂರು ಸ್ವರ, ಮೇಘದೂತ, ಮತ್ತು ಆಕಾಶದ ಹಕ್ಕು ವಿಮರ್ಶಾ ಸಂಕಲನಗಳು. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಗ್ನಿವರ್ಣ ಅವರ ಪ್ರಸಿದ್ಧ ನಾಟಕಗಳು. ಕಾಳಿದಾಸನ ಋತುಸಂಹಾರವನ್ನು ಋತುವಿಲಾಸ ಹೆಸರಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ. ಹಕ್ಕಿಸಾಲು ಮತ್ತು ಹೂವಿನ ಶಾಲೆ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಮಕ್ಕಳ ಕವಿತೆಗಳ ಸಂಕಲನ. ಇಲ್ಲಿಯ ಕವಿತೆಗಳು ಕ್ಯಾಸೆಟ್ಟಲ್ಲಿ ಬಂದಾಗ ಮಾರಾಟದಲ್ಲಿ ಇತಿಹಾಸವನ್ನೇ ನಿರ್ಮಿಸಿತ್ತು.
ಮೂರ್ತಿಯವರು ಒಳ್ಳೆಯ ಭಾಷಣಕಾರರಾಗಿದ್ದರು. ಸ್ನೇಹಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಅವರಿಗೆ ಅಂತಿಮ ನಮಗಳು ಎಂದು ಡಾ. ಪುರುಷೋತ್ತಮ ಬಿಳಿಮಲೆ ನುಡಿ ನಮನ ಸಲ್ಲಿಸಿದ್ದಾರೆ.