ಪೂಜೆ ಆರಾಧನೆಯಿಂದ ಊರಿಗೆ ಒಳಿತು

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವಕ್ಫ್ ಬೋರ್ಡ್‌ನವರು ಎಲ್ಲ ಜಾಗ ಕಬಳಿಸಿದಂತೆಯೇ ನಾವು ದೇವರ ಜಾಗ ಕಬಳಿಸಿದ್ದೇವೆ. ವಕ್ಫ್ ತಿದ್ದುಪಡಿ ಮಸೂದೆ ತಂದಂತೆ ನಾವು ಒತ್ತುವರಿ ಮಾಡಿದ ದೇವರ ಜಾಗ ಮರಳಿ ದೇವರಿಗೆ ಬಿಟ್ಟು ಬಿಡುತ್ತೇವೆ ಎಂಬ ಮಸೂದೆ ನಮ್ಮಿಂದಾಗಬೇಕು. ದೇವರ ಜಾಗದಲ್ಲಿ ಗುಡಿ ಕಟ್ಟಿಸಿ ಪೂಜೆ ಆರಾಧನೆ ನಡೆದರೆ ಊರಿಗೆ ಒಳಿತಾಗುತ್ತದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಸಮಗ್ರ ಜೀರ್ಣೋದ್ಧಾರಗೊಂಡ ಸಾಂತೂರು ಶ್ರೀ ಅಲ್ ಉರಿನಾಗ ಬ್ರಹ್ಮಸ್ಥಾನದಲ್ಲಿ ದಾನಿಗಳಿಂದ ನಿರ್ಮಿಸಿದ ಮುಖಮಂಟಪ ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅವಿಭಜಿತ ಜಿಲ್ಲೆಯ ಎಲ್ಲೆಂದರಲ್ಲಿ ನಾಗಬೀದಿಗಳಿದ್ದು, ಅಲ್ಲಿಯೇ ಗೃಹ ನಿರ್ಮಾಣ ಸಹಿತ ಹಲವು ತಪ್ಪುಗಳನ್ನು ನಾವು ಮಾಡುತ್ತೇವೆ. ಈ ತಪ್ಪನ್ನು ದೇವರನ್ನು ಒಪ್ಪಿಸುವಂತಹ ಕೆಲಸ ನಮ್ಮಿಂದಾಗಬೇಕು. ಹಿಂದಿನವರಿಗೆ ಸಿಗದಂತಹ ಸಮಗ್ರವಾಗಿ ದೇವಸ್ಥಾನ ನಿರ್ಮಾಣ ಮಾಡುವ ಮಹಾಯೋಗ ಈ ಕಾಲದ ಜನರಿಗೆ ದೇವರು ಒದಗಿಸಿಕೊಟ್ಟಿದ್ದಾನೆ. ಕೊಟ್ಟಂತಹ ಅವಕಾಶ ಸದುಪಯೋಗ ಮಾಡಿ ದಾನಿಗಳು ಹಾಗೂ ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ನಿರ್ಮಾಣವಾಗಿದೆ ಎಂದರು.

ಪ್ರಧಾನ ಅರ್ಚಕರಾದ ಸಾಂತೂರು ರಘುಪತಿ ಜೋಯಿಸ, ಸಾಂತೂರು ಅನಂತ ಜೋಯಿಸರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ದಿವಾಕರ ಎಂ.ಶೆಟ್ಟಿ, ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಶಶಿಕುಮಾರ್ ಬಿ.ಶೆಟ್ಟಿ ಬಾಲ್ಕಟ್ಟ ಸಾಂತೂರು, ಸುಜಿತ್ ಕೆ.ಶೆಟ್ಟಿ ಸಾಂತೂರು ಪರಾರಿ, ಹರಿಣಾಕ್ಷ ಶೆಟ್ಟಿ ಪಿಲಾರು, ಜೀರ್ಣೋದ್ಧಾರ ಸಮಿತಿ ಹಾಗೂ ಸಾಂತೂರು ಪಿಲಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಹೊರೆಕಾಣಿಕೆ ಮೆರವಣಿಗೆ

ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಅಂಗವಾಗಿ ಮುದರಂಗಡಿ ಪೇಟೆ ಅಶ್ವತ್ಥಕಟ್ಟೆಯಿಂದ ವಿವಿಧ ಬಿರುದಾವಳಿಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net